ಕರ್ನಾಟಕ

ಕನ್ನಡ ನಟ-ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ: 109 ಕೋಟಿಯ ದಾಖಲೆ ರಹಿತ ಆಸ್ತಿ ಪತ್ತೆ ..! ಒಟ್ಟು 25.3 ಕೆ.ಜಿ ಚಿನ್ನಾಭರಣ ಜಪ್ತಿ

Pinterest LinkedIn Tumblr

ಬೆಂಗಳೂರು: ಚಂದನವನದ ತಾರಾ ನಟರು ಮತ್ತು ನಿರ್ಮಾಪಕರ ಮನೆಗಳ ಮೇಲೆ ಮೂರು ದಿನದಿಂದ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಒಟ್ಟಾರೆ 109 ಕೋಟಿ ಅನಧಿಕೃತ ಆಸ್ತಿ ಪಾಸ್ತಿ ಪತ್ತೆ ಆಗಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಮತ್ತು ಗೋವಾದ ಒಟ್ಟು 180 ಐಟಿ ಅಧಿಕಾರಿಗಳು ಜ.3ರಂದು ಏಕಕಾಲದಲ್ಲಿ 21 ಕಡೆ ದಾಳಿ ನಡೆಸಿದ್ದ ವೇಳೆ 11 ಕೋಟಿ ರೂ. ಬೆಲೆ ಬಾಳುವ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದರಲ್ಲಿ 2.85 ಕೋಟಿ ರೂ. ನಗದು ಮತ್ತು 25 ಕೆ.ಜಿ. ಚಿನ್ನಾಭರಣವಿದೆ.

ಪತ್ತೆಯಾಗಿರುವ ಅನಧಿಕೃತ ಆಸ್ತಿ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಗೆ ಈಗಾಗಲೇ ಐಟಿ ಅಧಿಕಾರಿಗಳು ಪತ್ರ ಬರೆದಿದ್ದು, ಚಿತ್ರಮಂದಿರದ ಆದಾಯ ಘೋಷಣೆಯಲ್ಲೂ ಅಕ್ರಮ ಎಸಗಿರುವುದನ್ನೂ ಉಲ್ಲೇಖಿಸಿದ್ದಾರೆ. ಜತೆಗೆ ಬಾಕಿಯಿರುವ ತೆರಿಗೆ ಪಾವತಿಸುವಂತೆ ಐಟಿ ಇಲಾಖೆ ಸೂಚಿಸಿದೆ.

ನಟ ಶಿವರಾಜ್​ಕುಮಾರ್​, ಸುದೀಪ್​, ಯಶ್​, ಪುನೀತ್​, ನಿರ್ಮಾಪಕರಾದ ರಾಕ್​ಲೈನ್​ ವೆಂಕಟೇಶ್​, ವಿಜಯ್​ ಕಿರಗಂದೂರ್​, ಸಿ.ಆರ್​. ಮನೋಹರ್​, ಜಯಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಸತತ ಮೂರು ದಿನಗಳ ಕಾಲ ಈ ಸೆಲೆಬ್ರಿಟಿಗಳ ಮನೆಗಳಲ್ಲೇ ಮೊಕ್ಕಾಂ ಹೂಡಿದ್ದ ಅಧಿಕಾರಿಗಳು ನಿನ್ನೆ (ಜ.5) ಸಂಜೆ ಪರಿಶೀಲನೆಯನ್ನು ಅಂತ್ಯ ಗೊಳಿಸಿದ್ದರು. ಅವರ ಮನೆಗಳಲ್ಲಿ ಸಿಕ್ಕ ದಾಖಲೆ, ಹಣ ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದು, ಇಂದು ಅದರ ಒಟ್ಟಾರೆ ಮೌಲ್ಯದ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ನಟ, ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣದಲ್ಲಿ ಒಟ್ಟು 25.3 ಕೆ.ಜಿ ಚಿನ್ನಾಭರಣ, 2.85 ಕೋಟಿ ಹಣ ಜಪ್ತಿ ಮಾಡಲಾಗಿದೆ. ಒಟ್ಟಾರೆ ಈ ದಾಳಿಯಲ್ಲಿ ದಾಖಲೆ ಇಲ್ಲದ 109 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

21 ಸ್ಥಳಗಳಲ್ಲಿ 180 ಐಟಿ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಇದಕ್ಕಾಗಿ ಆದಾಯ ಇಲಾಖೆ ಕಳೆದ 3 ತಿಂಗಳಿಂದ ಇವರ ಆದಾಯಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿದೆ. ಈ ಕುರಿತಂತೆ ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ರವಾನೆ ಮಾಡಲಾಗಿದ್ದು, ಚಿತ್ರ ನಿರ್ಮಾಣ, ಪ್ರದರ್ಶನದ ವೇಳೆ ಹಣದ ವಹಿವಾಟು ಯಾವುದೇ ದಾಖಲೆ ಇಲ್ಲದೆಯಾಗಿರುವುದು ಸ್ಪಷ್ಟವಾಗಿದೆ.

ಉಳಿದಂತೆ ಯಾವ ಯಾವ ನಟ-ನಿರ್ಮಾಪಕರ ಮನೆಯಲ್ಲಿ ದಾಖಲೆ ಇಲ್ಲದ ಎಷ್ಟು ಹಣ ಹಾಗೂ ಚಿನ್ನಾಭರಣ ಸಿಕ್ಕಿದೆ ಎಂಬುದರ ಕುರಿತಾದ ಮಾಹಿತಿ ಇನ್ನೂ ಬಿಡುಗಡೆ ಮಾಡಿಲ್ಲ. ಅಲ್ಲದೆ ಇನ್ನೂ ಸಹ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

Comments are closed.