ಕರ್ನಾಟಕ

ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿಕೊಂಡ ಮೂವರು ವಿದೇಶಿಗರು

Pinterest LinkedIn Tumblr

ಬಳ್ಳಾರಿ: ಪಾಶ್ಚಿಮಾತ್ಯ ಸಂಸ್ಕೃತಿಗೆ ಭಾರತೀಯರು ಮಾರುಹೋಗುತ್ತಿರುವ ಸಂದರ್ಭದಲ್ಲಿ ವಿದೇಶಿಗರು ಹಿಂದೂ ದೇವರ ಮೇಲೆ ನಂಬಿಕೆ ಇಟ್ಟುಕೊಂಡು ಹರಕೆ ತೀರಿಸಿರುವ ಘಟನೆ ಬೆಳಕಿಗೆ ಬಂದಿದೆ.

ವಿಶ್ವಪ್ರಸಿದ್ಧ ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಇಂದು ಆಗಮಿಸಿದ ಮೂವರು ವಿದೇಶಿಗರು ಶ್ರೀ ವಿರುಪಾಕ್ಷನಿಗೆ 20 ಸಾವಿರ ಮೌಲ್ಯದ ನಾಗರ ವಿಗ್ರಹ ಹಾಗೂ ಎರಡು ಹಿತ್ತಾಳೆ ದೀಪಗಳನ್ನು ನೀಡಿ ಹರಕೆ ತೀರಿಸಿದ್ದಾರೆ.

ಫ್ರಾನ್ಸ್ ದೇಶದಿಂದ ಪ್ರವಾಸಕ್ಕೆ ಆಗಮಿಸಿರುವ ಉಂಬೆರ್ಟೋ, ಜೀನ್ ಲುಕಾಸ್ ಮತ್ತು ಜೀನ್ ಎನ್ನುವ ಮೂವರು ಇಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಹಿಂದೂ ಸಂಪ್ರದಾಯದಂತೆ ದೇಶಿ ರೀತಿ ಶ್ವೇತವಸ್ತ್ರ ಧರಿಸಿ, ತುಂಗಭದ್ರ ನದಿಯಲ್ಲಿ ಸ್ನಾನ ಮಾಡಿ ಶ್ರೀ ವಿರುಪಾಕ್ಷನ ದರುಶನ ಪಡೆದಿದ್ದಾರೆ. ಶ್ರೀ ವಿರುಪಾಕ್ಷನಿಗೆ ತಾವು ಅಂದುಕೊಂಡಿದ್ದ ಹರಕೆ ತೀರಿಸಲು 20 ಸಾವಿರ ಮೌಲ್ಯದ ಬೆಳ್ಳಿ ನಾಗಪ್ಪ ಹಾಗೂ ಎರಡು ಹಿತ್ತಾಳೆ ದೀಪಗಳನ್ನು ದೇವಸ್ಥಾನಕ್ಕೆ ಸಲ್ಲಿಸಿದ್ದಾರೆ. ದೇವಸ್ಥಾನದ ಅರ್ಚಕರಾದ ಶೇಷುಸ್ವಾಮಿ, ಪ್ರಶಾಂತ ಪೂಜಾರ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹರಕೆ‌, ಕಾಣಿಕೆ ವಸ್ತುಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಿ. ಶ್ರೀನಿವಾಸ್ ಅವರು ದೇವಸ್ಥಾನದ ಪರವಾಗಿ ಸ್ವೀಕರಿಸಿದರು.

ತಾವು ಅಂದುಕೊಂಡಿದ್ದು ಜರುಗಲಿ ಎಂದು ತಮ್ಮ ಸ್ನೇಹಿತರು ಹೇಳಿದಂತೆ ಶ್ರೀ ವಿರುಪಾಕ್ಷನಿಗೆ ನಾವು ಹರಕೆ ತೀರಿಸಿದ್ದೇವೆ. ನಾವು ಹಿಂದೂ ಸಂಪ್ರದಾಯವನ್ನು ಗೌರವಿಸುತ್ತೇವೆ. ಪುಟ್ಟಪರ್ತಿ ಸಾಯಿಬಾಬಾ ಭಕ್ತರು. ಪ್ರತಿವರುಷಕ್ಕೆ ಭಾರತ ದೇಶಕ್ಕೆ ಬರುತ್ತೇವೆ. ಈ ವರುಷ ಹಂಪಿಯ ಲಕ್ಷಾಂತರ ಭಕ್ತರಂತೆ ನಾವು ಹರಕೆ ತೀರಿಸಿದೆವು ಎಂದು ವಿದೇಶಿ ಭಕ್ತರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Comments are closed.