ಕರಾವಳಿ

ರಾಜ್ಯದ ಪ್ರತಿಯೊಬ್ಬರಿಗೂ ಸೂರು ಸಿಗಬೇಕೆಂಬುದು ಸರ್ಕಾರದ ನಿಲವು: ಡಾ.ಜಯಮಾಲ ಹೇಳಿಕೆ

Pinterest LinkedIn Tumblr

ಕುಂದಾಪುರ: ಹಕ್ಕಿ ಕೂಡಾ ತನ್ನ ಮರಿ ಮೊಟ್ಟೆಗಾಗಿ ಗೂಡು ನೇದು ಕಟ್ಟಿಕೊಳ್ಳುತ್ತದೆ. ಪ್ರಾಣಿಗಳು ಕೂಡಾ ನೆಲದಲ್ಲಿ ಬಿಲ ಕೊರೆದು ವಂಶಾವೃದ್ಧಿಗಾಗಿ ಸೂರು ಮಾಡಿಕೊಳ್ಳುತ್ತವೆ. ಮನುಷ್ಯರಿಗೆ ವಾಸ ಮಾಡಲು ಸೂರಿಲ್ಲ ಎಂದರೆ ಅದು ಅತಿಶಯೋಕ್ತಿಯಾಗುತ್ತದೆ. ರಾಜ್ಯದಲ್ಲಿರುವ ಪ್ರತಿಯೊಬ್ಬರಗೂ ಸೂರು ಸರ್ಕಾರದ ನಿಲುವಾಗಿದ್ದು, ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕೂತವರಿಗೆ ಹಕ್ಕುಪತ್ರ ನೀಡುತ್ತಿದ್ದು, ಈ ಪ್ರಕ್ರಿಯೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವವರೆಗೂ ನಡೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದರು.

ತಾಲೂಕು ಆಡಳಿತ ಆಶ್ರಯದಲ್ಲಿ ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜ್ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಬುಧವಾರ ನಡೆದ ವಿವಿಧ ಯೋಜನೆ ಹಕ್ಕುಪತ್ರ ವಿತರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರ್ಕಾರ ಸೂರಿಲ್ಲದವರಿಗೆ ಕಾನೂನು ಹಾಗೂ ಭಾವನಾತ್ಮಕ ಸ್ಪಂದನೆ ಮೂಲಕ ತಲೆ ಮೇಲೊಂದು ಸೂರು ಒದಗಿಸುವ ಕೆಲಸ ಮಾಡಲಿದೆ ಎಂದ ಅವರು, ಸರ್ಕಾರ ಪ್ರತಿಯೊಬ್ಬರಿಗೂ ಸೂರು ಕೊಡಲು ಬದ್ದ. ಶ್ರೀಮತಿ ಇಂದಿರಾ ಗಾಂಧಿ ಆಶಯದಂತೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದ್ದು, ಉದ್ಯಮಿ ಯೋಜನೆ ಮೂಲಕ ಮಹಿಳೆಯರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಇದರ ಪ್ರಯೋಜನ ಮಹಿಳೆಯರು ಪಡೆದುಕೊಳ್ಳುವಂತೆ ಕರೆ ನೀಡಿದರು.

ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಟಿ.ಭೂಬಾಲನ್, ತಾಪಂ ಇ‌ಒ ಕಿರಣ್ ಫೆಡ್ನೇಕರ್, ಕಾಲೇಜ್ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ, ಕೆಡಿಪಿ ಸಮಿತಿ ಸದಸ್ಯ ರಾಜು ಪೂಜಾರಿ ಇದ್ದರು.

ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕುಂದಾಪುರ ತಹಸೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ನಿರೂಪಿಸಿದರು. ಕಂದಾಯ ಇಲಾಖೆ ಉಪನಿರೀಕ್ಷಕ ಭರತ್ ವಿ.ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು.

ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಸೂರು ಸಿಗಬೇಕು ಎಂಬ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಮುತುವರ್ಜಿಯಲ್ಲಿ, ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ 94ಸಿ ಹಕ್ಕು ಪತ್ರ ನೀಡುವ ಸಲುವಾಗಿ ರೂಪಿಸಿದ ನೀತಿಯಿಂದ ಸರ್ಕಾರಿ ಸ್ಥಳದಲ್ಲಿ ಕೂತವರಿಗೆ ಹಕ್ಕುಮತ್ರ ನೀಡಲಾಗುತ್ತಿದೆ. 120 ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ, 40 ಜನರಿಗೆ ಪಿಂಜಣಿ, 66ಜನರಿಗೆ ಸಂಧ್ಯಾಸುರಕ್ಷಾ ವೇತನ ಅರ್ಜಿ ವಿತರಿಸಲಾಗಿದೆ.
– ಡಾ.ಜಯಮಾಲಾ, ಜಿಲ್ಲಾ ಉಸ್ತುವಾರಿ ಸಚಿವೆ.

Comments are closed.