ಕರಾವಳಿ

ಕುಲಶೇಖರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಚಾಲನೆ- ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರಿನ ಕುಲಶೇಖರದಲ್ಲಿರುವ ಕೆಎಂಎಫ್ ಡೈರಿಯಿಂದ ಕಾರ್ಕಳಕ್ಕೆ ಹೋಗುವ ಮುಖ್ಯ ರಸ್ತೆಯ ತನಕದ ರಸ್ತೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣದ ಕಾಮಗಾರಿಗೆ ಸೋಮವಾರ (ನವೆಂಬರ್ 19)ದಿಂದ ಚಾಲನೆ ಸಿಗಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಕಾಂಕ್ರೀಟಿಕರಣದ ಕಾಮಗಾರಿ ನಡೆಯಲಿರುವ ಕುಲಶೇಖರದ ಪ್ರದೇಶಕ್ಕೆ ಭೇಟಿಕೊಟ್ಟ ನಂತರ ಮಾತನಾಡಿದ ಶಾಸಕರು ಈ ಭಾಗದ ಜನರ ಬಹುಕಾಲದ ಬೇಡಿಕೆ ಈಗ ಈಡೇರಲಿದೆ. ನಾನು ಚುನಾವಣಾ ಪ್ರಚಾರಕ್ಕೆ ಈ ಭಾಗಕ್ಕೆ ಬಂದಿದ್ದಾಗ ಜನರು ಈ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದರು.

ಒಟ್ಟು ಐನೂರು ಮೀಟರ್ ಉದ್ದ, ಇಪ್ಪತ್ತನಾಲ್ಕು ಅಡಿ ಅಗಲದ ರಸ್ತೆಗೆ ಕಾಂಕ್ರೀಟಿಕರಣ ನಡೆಯಲಿದ್ದು ಇದಕ್ಕೆ ಒಂದು ಕೋಟಿ ವೆಚ್ಚವಾಗಲಿದೆ. ಬಹಳ ಜನನಿಬಿಡ ರಸ್ತೆಯಾಗಿರುವುದರಿಂದ ಮೊದಲ ಹಂತದಲ್ಲಿ ಹನ್ನೆರಡು ಅಡಿ ಅಗಲಕ್ಕೆ ನಂತರ ಅದು ಮುಗಿದ ಬಳಿಕ ಇನ್ನೊಂದು ಹಂತದಲ್ಲಿ ಉಳಿದ ಹನ್ನೆರಡು ಅಡಿ ಅಗಲಕ್ಕೆ ಕಾಂಕ್ರೀಟಿಕರಣ ನಡೆಸಲಾಗುವುದು.

ಕಾಮಗಾರಿ ನಡೆಯುವಾಗ ವಾಹನ ಸಂಚಾರಕ್ಕೆ ಒಂದಿಷ್ಟು ದಿನ ಅಡಚಣೆ ಆಗಬಹುದು. ಆದ್ದರಿಂದ ಜನ ಅಭಿವೃದ್ಧಿಯನ್ನು ದೂರದೃಷ್ಟಿಯಲ್ಲಿಟ್ಟು ನಡೆಯಲಿರುವ ಕಾಮಗಾರಿ ಆದ ಕಾರಣ ಸಹಕರಿಸಬೇಕೆಂದು ಶಾಸಕ ಕಾಮತ್ ಹೇಳಿದರು. ಗ್ರಾಮಸ್ಥರು ಮತ್ತು ಕೆಎಂಎಫ್ ಡೈರಿಯ ಅಧಿಕಾರಿಗಳಿಂದ ಸಲಹೆ ಪಡೆದು ಪಿಡಬ್ಲೂಡಿ ಇಲಾಖೆಯ ಇಂಜಿನಿಯರ್ ಗಳು ಸೂಕ್ತ ರೀತಿಯಲ್ಲಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕು ಎಂದು ಸೂಚನೆ ಕೊಟ್ಟಿರುವುದಾಗಿ ಶಾಸಕರು ತಿಳಿಸಿದರು.

ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ರಮೇಶ ಕಂಡೆಟ್ಟು, ಅಜಯ್, ಯೋಗೀಶ್, ಹರಿಣಿ, ರಾಮಚಂದ್ರ ಚೌಟ, ನವೀನ್, ಪ್ರೇಮ್ ಮತ್ತು ಕೆಎಂಎಫ್ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Comments are closed.