ಕರಾವಳಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅರ್ಹ ಫಲನುಭವಿಗಳಿಗೆ 1.25 ಕೋಟಿ ರೂ. ನೆರವು ನೀಡಲಾಗಿದೆ : ಐಕಳ ಹರೀಶ್ ಶೆಟ್ಟಿ

Pinterest LinkedIn Tumblr

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅರ್ಹರಿಗೆ ಆರ್ಥಿಕ ನೆರವು, ಪ್ರಮಾಣ ಪತ್ರ ವಿತರಣೆ

ಮಂಗಳೂರು, ನವೆಂಬರ್.10: ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಗೃಹ ನಿರ್ಮಾಣ, ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಹಾಗೂ ವಿವಾಹಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಕಳೆದ ಆರು ತಿಂಗಳಿನಿಂದ 1.25 ಕೋಟಿ ರೂ. ನೆರವು ನೀಡಲಾಗಿದೆ. ಮುಂದೆಯೂ ಈ ಯೋಜನೆಯನ್ನು ಮುಂದುವರಿಸಲು ಫಲಾನಿಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಮತ್ತು ಆಯ್ಕೆಯಾದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಬಂಟ್ಸ್ ಹಾಸ್ಟೇಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ ಮನೆ ನಿರ್ಮಾಣ ಯೋಜನೆಯಡಿ ಕೊಡಗು ಜಿಲ್ಲೆಯ ಪದ್ಮಿನಿ ಎ.ಸಿ., ಕುಂದಾಪುರದ ಶಶಿಪ್ರಭಾ, ಗಿರಿಜಮ್ಮ, ಸರೋಜಾ ಮತ್ತು ಲಕ್ಷ್ಮೀ ಶೆಡ್ತಿ, ಮುಲ್ಕಿಯ ಪುಷ್ಪಾ ರಘುರಾಮ ಶೆಟ್ಟಿ, ಸುಂದರ ಶೆಟ್ಟಿ, ಉಡುಪಿಯ ರತ್ನಾ ಶೆಟ್ಟಿ, ಜಯ ಶೆಟ್ಟಿ, ಹೇಮಾ ಶೆಟ್ಟಿ, ಶಿವರಾಜ ಶೆಟ್ಟಿ, ಬೆಳ್ತಂಗಡಿಯ ಪದ್ಮಾವತಿ ಶೆಟ್ಟಿ, ರತ್ನಾವತಿ ಶೆಟ್ಟಿ, ಗುರುಪುರದ ವನಜಾ ಶೆಟ್ಟಿ, ಪುಷ್ಪಲತಾ ರೈ, ಸೋಮೇಶ್ವರದ ಸಂತೋಷ್ ಶೆಟ್ಟಿ, ವಿಟ್ಲ ಪಡ್ನೂರಿನ ರತ್ನ ರೇವತಿ ಶೆಟ್ಟಿ, ಸುಮಿತ್ರಾ ಜೆ. ಶೆಟ್ಟಿ, ತೆಂಕುಳಿಪ್ಪಾಟಿಯ ವಸಂತ ಆಳ್ವ, ಪುತ್ತೂರಿನ ರಾಧಾವತಿ ಶೆಟ್ಟಿ ಯವರಿಗೆ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡುವ ಪ್ರಮಾಣ ಪತ್ರವನ್ನು ವಿತರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದಲ್ಲದೆ ಒಕ್ಕೂಟದ ವತಿಯಿಂದ 39 ಕುಟುಂಬಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ ನೀಡಲು ಒಕ್ಕೂಟ ಸಹಕರಿಸಿದೆ.ಒಕ್ಕೂಟದ ವತಿಯಿಂದ ಅವಿಭಜಿತ ದ.ಕ ಜಿಲ್ಲೆ, ಕಾಸರಗೋಡು ಜಿಲ್ಲೆಗಳ 1000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿವಿಧ ಸಂಘಸಂಸ್ಥೆಗಳ ಮೂಲಕ ವಿದ್ಯಾರ್ಥಿ ವೇತನ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ 10 ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ ನೀಡಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ 30 ಕುಟುಂಗಳ ಸದಸ್ಯರಿಗೆ ಚಿಕಿತ್ಸೆಗೆ ನೆರವು ನೀಡಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಈಡಾದ ಕೊಡಗು, ಸುಳ್ಯ ಮತ್ತಿತರ ಕಡೆಗಳಿಗೆ ನೆರವು ನೀಡಲು ಜಿಲ್ಲಾಧಿಕಾರಿ ನಿಧಿಗೆ 2 ಲಕ್ಷ ರೂ. ನೆರವು ನೀಡಲಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಆರೈಕೆ ಮಾಡುತ್ತಿರುವವರಿಗೆ ಒಂದು ತಿಂಗಳ ರಾತ್ರಿ ಊಟದ ವ್ಯವಸ್ಥೆಗಾಗಿ ಎಂ ಫ್ರೆಂಡ್ಸ್‌ನ ಕಾರುಣ್ಯಾ ಯೋಜನೆಗೆ ನೀಡಲು ನಿರ್ಧರಿಸಿದೆ. ಎಚ್‌ಐವಿ ಪೀಡಿತ ಕುಟುಂಬದ ಮದುವೆ ವೆಚ್ಚಕ್ಕೆ ಆರ್ಥಿಕ ನೆರವು ಸಂಘಟನೆ ನಿರ್ಧರಿಸಿದೆ. ಅದೇರೀತಿ ಕರ್ನಿರೆ ವಿಶ್ವನಾಥ ಶೆಟ್ಟಿ ಒಕ್ಕೂಟಕ್ಕೆ ದಾನವಾಗಿ ನೀಡಿದ ಒಂದು ಎಕರೆ ಭೂಮಿಯನ್ನು ನಿವೇಶನರಹಿತ ಅರ್ಹರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹರೀಶ್ ಶೆಟ್ಟಿ ತಿಳಿಸಿದರು.

ಈ ವೇಳೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ, ಕೊಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ನಿರ್ದೇಶಕರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಪೋಷಕ ಸದಸ್ಯ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ರತ್ನಾಕರ ಶೆಟ್ಟಿ, ಶರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

__ Sathish Kapikad (Mob: 9035089084)

Comments are closed.