ಕರಾವಳಿ

ನೋಟು ಅಮಾನ್ಯೀಕರಣದಿಂದ ದೇಶಕ್ಕೆ 8 ಸಾವಿರ ಕೋಟಿ ನಷ್ಟ : ರಮಾನಾಥ ರೈ ಆರೋಪ

Pinterest LinkedIn Tumblr

ಮಂಗಳೂರು, ನವೆಂಬರ್.09: ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನೋಟು ಅಮಾನ್ಯೀಕರಣಕ್ಕೆ 2 ವರ್ಷ ತುಂಬಿದ ಹಿನ್ನಲೆಯಲ್ಲಿ ಮತ್ತು ವಿಜಯಾ ಬ್ಯಾಂಕನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ಖಂಡಿಸಿ ಶುಕ್ರವಾರ ಪಕ್ಷದ ಕಚೇರಿ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, 2016ರಲ್ಲಿ ನೋಟು ನಿಷೇಧಿಸುವ ಮುನ್ನ ಬಿಜೆಪಿಗರು ವಿದೇಶದಿಂದ ಕಪ್ಪು ಹಣ ವಾಪಸ್ ತರುತ್ತೇವೆ, ಭಯೋತ್ಪಾದನೆಯನ್ನು ನಿಗ್ರಹಿಸುತ್ತೇವೆ ಎಂದಿದ್ದರು. ಆದರೆ, ಈವರೆಗೂ ಆ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದರು.

ಅಧಿಕಾರಕ್ಕೇರುವ ಮುನ್ನ ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದರು. ಆದರೆ, ಅಧಿಕಾರಕ್ಕೇರಿದ ಮೋದಿ ಏನನ್ನೂ ಮಾಡಿಲ್ಲ. ನೋಟು ನಿಷೇಧದಿಂದ 21 ಸಾವಿರ ಕೋ.ರೂ. ಮರಳಿ ಬಂದಿದ್ದರೆ, ಹೊಸ ನೋಟುಗಳ ಮುದ್ರಣಕ್ಕೆ 29 ಸಾವಿರ ಕೋ.ರೂ. ವ್ಯಯಿಸಿತು. ಈ ಮೂಲಕ ದೇಶಕ್ಕೆ ಎಂಟು ಸಾವಿರ ಕೋಟಿ ನಷ್ಟವಾಗಿದೆ. ಮೋದಿಯದ್ದು ಇದ್ಯಾವ ಆರ್ಥಿಕ ನೀತಿ ಎಂಬುದು ಗೊತ್ತಾಗುತ್ತಿಲ್ಲ, ನೋಟು ಅಮಾನ್ಯದ ಬಳಿಕ ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಂತ 140ಕ್ಕೂ ಅಧಿಕ ಮಂದಿ ಮೃತಪಟ್ಟರು. ವಿದೇಶದಲ್ಲಿ ಹೀಗೆ ಆಗಿದ್ದರೆ ಅಲ್ಲಿನ ಜನರು ದಂಗೆ ಏಳುತ್ತಿದ್ದರು ಎಂದು ರೈ ಹೇಳಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಪಕ್ಷದ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಬಲರಾಜ ರೈ, ಕೆ.ಕೆ.ಶಾಹುಲ್ ಹಮೀದ್, ಸದಾಶಿವ ಉಳ್ಳಾಲ್, ಶಶಿಧರ ಹೆಗ್ಡೆ, ನವೀನ್ ಡಿಸೋಜ, ಮಮತಾ ಗಟ್ಟಿ, ಮುಹಮ್ಮದ್ ಮೋನು, ಎನ್.ಎಸ್.ಕರೀಂ, ಅಬೂಬಕರ್ ಕುದ್ರೋಳಿ ಮತ್ತಿತರರು ಪಾಲ್ಗೊಂಡಿದ್ದರು.

Comments are closed.