ಕರಾವಳಿ

ಅಪಘಾತದಲ್ಲಿ ದುರ್ಮರಣಕ್ಕೀಡಾದ ಕಾನ್ಸ್‌ಟೆಬಲ್ ನಾಗೇಶ್‌ರಿಗೆ ಸರಕಾರಿ ಗೌರವದೊಂದಿಗೆ ಅಂತಿಮ ನಮನ

Pinterest LinkedIn Tumblr

ಕುಂದಾಪುರ: ಚಲಿಸುತ್ತಿದ್ದ ಲಾರಿಯ ಚಾಲಕ ಯಾವುದೇ ಸೂಚನೆ ನೀಡದೇ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವರಾರರಾಗಿದ್ದ ಬೈಂದೂರು ಪೊಲೀಸ್ ಕಾನ್ಸ್‌ಟೆಬಲ್ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಮುಂಜಾನೆ ಬೈಂದೂರು ತಾಲೂಕು ನಾಗೂರಿನ ಸಂದೀಪನ್‌ ಶಾಲೆ ಎದುರು ರಾ.ಹೆ ಯಲ್ಲಿ ನಡೆದಿದೆ.

ಬೈಂದೂರು ಸಮೀಪದ‌ ಶಿರೂರು ನಿವಾಸಿ ನಾಗೇಶ್ (36)ಮೃತಪಟ್ಟ ದುರ್ದೈವಿಯಾಗಿದ್ದು ಇವರು 2005 ಬ್ಯಾಚ್ ಪೊಲೀಸ್ ಕಾನ್ಸ್‌ಟೆಬಲ್. ಸದ್ಯ ಬೈಂದೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಲ್ಲಿ ಗುಪ್ತ ಮಾಹಿತಿ ಸಿಬ್ಬಂದಿಯಾಗಿದ್ದರು.

ಮುಗಿಲು ಮುಟ್ಟಿದ ರೋಧನ
ಮಿತಭಾಷಿ, ಮ್ರದು ಸ್ವಭಾವದವರಾಗಿದ್ದ ನಾಗೇಶ ಮೃತ ವಿಚಾರ ತಿಳಿಯುತ್ತಿದ್ದಂತೆಯೇ ಕುಟುಂಬಿಕರು, ಸ್ನೇಹಿತರು, ಬಂಧುಗಳು ಬೈಂದೂರಿನ ಶವಗಾರದತ್ತ ದೌಡಾಯಿಸಿದ್ದರು. ಮುಂಬೈಯಲ್ಲಿದ್ದ ಸಹೋದರರು ಆಗಮಿಸುವ ತನಕ ಮರಣೋತ್ತರ ಪರೀಕ್ಷೆಗಾಗಿ ಕಾಯಲಾಗಿದ್ದು ಸಂಜೆ ೩.೧೫ರ ಸುಮಾರಿಗೆ ಬಂದ ಸೋದರರು ನಾಗೇಶ್ ಮೃತದೇಹವನ್ನು ಕಂಡು ಬಿಕ್ಕಿಬಿಕ್ಕಿ ಅತ್ತರು. ಈ ಸಂದರ್ಭ ಅಲ್ಲಿ ನೆರೆದಿದ್ದ ಪೊಲೀಸರು, ಬಂಧುಮಿತ್ರರ ಕಣ್ಣಾಲಿಗಳು ತುಂಬಿ ಬಂದವು.

ಸರಕಾರಿ ಗೌರವದೊಂದಿಗೆ ಅಂತಿಮ ವಿದಾಯ
ಕರ್ತವ್ಯದಲ್ಲಿರುವಾಗಲೇ ಮಡಿದ ನಾಗೇಶ್ ಅವರಿಗೆ ಸಕಲ ಸರಕಾರಿ ವಿಧಿವಿಧಾನಗಳೊಂದಿಗೆ ಬೈಂದೂರು ಪೊಲೀಸ್ ಠಾಣೆ ಆವರಣದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಬೈಂದೂರು ಸಿಪಿಐ ಪರಮೇಷ್ವರ ಗುನಗ, ಬೈಂದೂರು ಠಾಣೆ ಪಿಎಸ್ಐ ತಿಮ್ಮೇಶ್ ಬಿ.ಎನ್., ವಿವಿಧ ಠಾಣೆಯ ಉಪನಿರೀಕ್ಷಕರು, ಸಿಬ್ಬಂದಿಗಳು ಈ ಸಂದರ್ಭ ಇದ್ದರು.

ನಡೆದಿದ್ದೇನು?
ಬುಧವಾರ ರಾತ್ರಿಯವರೆಗೆ ತನ್ನ ಬೀಟ್ ಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಮಾಮೂಲಿಯಂತೆ ಠಾಣೆಯ ಕೆಲಸ ಕಾರ್ಯಗಳಲ್ಲಿ ತೊಂಡಗಿಸಿಕೊಂಡಿದ್ದು ರಾತ್ರಿ ಪಾಳಯದಲಿದ್ದ ಅವರಿಗೆ ಯಾವುದೋ ಮಾಹಿತಿ ಬಂದ ಕಾರಣ ತನ್ನ ಬೈಕ್ ಏರಿ ೨.೨೦ರ ಸುಮಾರಿಗೆ ಠಾಣೆಯಿಂದ ನಾಗೂರಿನತ್ತ ಸಾಗಿದ್ದಾರೆ. ಈ ವೇಳೆ ತನ್ನ ಎದುರು ಸಾಗುತ್ತಿದ್ದ ಲಾರಿ ಸಡನ್ನಾಗಿ ಬ್ರೇಕ್ ದೊಡೆದ ಪರಿಣಾಮ ಬೈಕ್ ಲಾರಿಯ ಹಿಂಭಾಗಕ್ಕೆ ಗುದ್ದಿದ್ದು ಕೂಡಲೇ ಅಲ್ಲಿದ್ದ ಸ್ಥಳೀಯ ವ್ಯಕ್ತಿಯೊಬ್ಬರು ಲಾರಿ ಚಾಲಕನ ಸಹಕಾರದೊಂದಿಗೆ ಬೈಂದೂರಿನ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ಚಿಕಿತ್ಸೆ ಫಲಕಾರಿಯಾಗದೇ ನಾಗೇಶ್ ಮೃತಪಟ್ಟಿದ್ದಾರೆ.

ಕಾರ್ಕಳ, ಕೊಲ್ಲೂರು, ಕುಂದಾಪುರ ಟ್ರಾಫಿಕ್ ಠಾಣೆಯಲ್ಲಿ ಸಿಬ್ಬಂದಿಯಾಗಿದ್ದ ಅವರು ಮೂರು ವರ್ಷಗಳ ಹಿಂದೆ ಬೈಂದೂರಿಗೆ ವರ್ಗಾವಣೆಗೊಂಡಿದ್ದರು. ನಾಗೇಶ್ ಎಂಟು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ನಾಗೇಶ್ ತಂದೆ ನಾಣು ಬಿಲ್ಲವ, ತಾಯಿ ವೆಂಕಮ್ಮ, ಪತ್ನಿ ಅಂಜಲಿ, ಇಬ್ಬರು ಸೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ:    

ರಸ್ತೆ ಅಪಘಾತದಲ್ಲಿ ಬೈಂದೂರು ಕಾನ್ಸ್‌ಟೆಬಲ್ ನಾಗೇಶ್ ದಾರುಣ ಸಾವು

Comments are closed.