ಕರಾವಳಿ

ರಸ್ತೆ ಅಪಘಾತದಲ್ಲಿ ಬೈಂದೂರು ಕಾನ್ಸ್‌ಟೆಬಲ್ ನಾಗೇಶ್ ದಾರುಣ ಸಾವು

Pinterest LinkedIn Tumblr

ಕುಂದಾಪುರ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವರಾರರಾಗಿದ್ದ ಬೈಂದೂರು ಪೊಲೀಸ್ ಕಾನ್ಸ್‌ಟೆಬಲ್ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಮುಂಜಾನೆ ಬೈಂದೂರು ತಾಲೂಕು ನಾಗೂರಿನ ಸಂದೀಪನ್‌ ಶಾಲೆ ಸಮೀಪದ‌ ರಾ.ಹೆ ಯಲ್ಲಿ ನಡೆದಿದೆ.

ಬೈಂದೂರು ಸಮೀಪದ‌ ಶಿರೂರು ನಿವಾಸಿ ನಾಗೇಶ್ ಮೃತಪಟ್ಟ ದುರ್ದೈವಿಯಾಗಿದ್ದು ಇವರು 2005 ಬ್ಯಾಚ್ ಪೊಲೀಸ್ ಕಾನ್ಸ್‌ಟೆಬಲ್. ಸದ್ಯ ಬೈಂದೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಲ್ಲಿ ಗುಪ್ತ ಮಾಹಿತಿ ಸಿಬ್ಬಂದಿ (ಎಸ್.ಬಿ)ಯಾಗಿದ್ದರು.

ನಿನ್ನೆಯೂ ಕೂಡ ಮಾಮೂಲಿಯಂತೆ ಠಾಣೆಯ ಕೆಲಸ ಕಾರ್ಯಗಳಲ್ಲಿ ತೊಂಡಗಿಸಿಕೊಂಡಿದ್ದ ಅವರು ನಸುಕಿನ ಜಾವ ಬೈಕ್ ನಲ್ಲಿ‌ ಗಸ್ತು ತಿರುಗುತ್ತಿದ್ದ ವೇಳೆ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದೇ ಹೆದ್ದಾರಿ ಬಳಿ ಲಾರಿ ನಿಲ್ಲಿಸಿದ್ದು ಅದನ್ನರಿಯದೇ ನಾಗೇಶ್ ಬೈಕ್ ಲಾರಿಗೆ ಗುದ್ದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಮೊದಲು ಕುಂದಾಪುರ ಟ್ರಾಫಿಕ್ ಠಾಣೆಯಲ್ಲಿ ಸಿಬ್ಬಂದಿಯಾಗಿದ್ದ ಅವರು ವರ್ಷಗಳ ಹಿಂದೆ ಬೈಂದೂರಿಗೆ ವರ್ಗಾವಣೆಗೊಂಡಿದ್ದರು. ನಾಗೇಶ್ ಕೆಲವು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.