ಮಂಗಳೂರು ಅಕ್ಟೋಬರ್ 23: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದವರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ಸಮಾಜ ಕಲ್ಯಾಣ ಇಲಾಖೆಯು ಪ್ರಕರಣ ವಿಚಾರಣಾ ಹಂತದಲ್ಲಿ ನಿರಂತರವಾಗಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.
ಅವರು ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದೌರ್ಜನ್ಯ ಪ್ರಕರಣಗಳ ದೂರುಗಳು ಬಂದಾಗ ವಿಳಂಭವಿಲ್ಲದೇ ದಾಖಲಿಸಬೇಕು. ಪ್ರಕರಣಗಳು ದಾಖಲಾದ ನಂತರ ವಿಚಾರಣೆಯಾಗಿ, ನೈಜ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತೀ ತಿಂಗಳು ದೌರ್ಜನ್ಯ ಪ್ರಕರಣಗಳ ಬಗ್ಗೆ ನಿಗಾ ವಹಿಸಿ, ಅವುಗಳ ಪ್ರಗತಿ ಬಗ್ಗೆ ನಿರಂತರ ಗಮನಹರಿಸಲು ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿರುವ ಡಿ.ಸಿ. ಮನ್ನಾ ಭೂಮಿಗಳನ್ನು ಗುರುತಿಸಲು ಈಗಾಗಲೇ ಸಮಿತಿ ರಚಿಸಿದ್ದು, ಸಮಿತಿ ವರದಿಯನ್ನು ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಡಿಸಿ ಮನ್ನಾ ಭೂಮಿಯಲ್ಲಿ ಕಂಡುಬಂದಿರುವ ಒತ್ತುವರಿಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಫಾಯಿ ಕರ್ಮಚಾರಿಗಳ ವಸತಿ ಯೋಜನೆಯಡಿ ಪೌರಕಾರ್ಮಿಕರಿಗೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನಿಮಿಸಲಾಗುತ್ತಿರುವ ಜಿ+3 ಮಾದರಿಯ ವಸತಿ ಸಂಕೀರ್ಣದಲ್ಲಿ ಮನೆಗಳು ಕೇವಲ 350 ಚದರ ಅಡಿ ಇದ್ದು, ಇದರಲ್ಲಿ ಒಂದು ಕುಟುಂಬ ವಾಸಿಸಲು ಅಸಾಧ್ಯವಾಗಿದೆ ಎಂದು ಜಾಗೃತಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಿಯಮಾನುಸಾರ 350 ರಿಂದ 1200 ಚದರ ಅಡಿಯವರೆಗೂ ಒಂದು ಮನೆ ನಿರ್ಮಿಸಿಕೊಡಲು ಅವಕಾಶವಿದೆ. ಅಲ್ಲದೇ, ಪ್ರತೀ ಮನೆ ನಿರ್ಮಾಣಕ್ಕೆ ಸರಕಾರ ಮತ್ತು ಮಹಾನಗರಪಾಲಿಕೆಯಿಂದ ಒಟ್ಟಾರೆ ರೂ. 7.50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಹೀಗಿದ್ದರೂ, ಸಾಧನೆಯಲ್ಲಿ ಪ್ರಗತಿ ದಾಖಲಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ನಗರ/ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಕ್ಲಪ್ತ ಸಮಯಕ್ಕೆ ಅವರು ಇರುವಲ್ಲಿಗೇ ಪೂರೈಕೆ ಮಾಡಬೇಕು. ದಾನಿಗಳ ಮೂಲಕವೂ ಉಪಹಾರವನ್ನು ಪ್ರಾಯೋಜಿಸಿ ಪೂರೈಸಬಹುದು. ಕಾಲಕಾಲಕ್ಕೆ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಣ್ಣ ಸಣ್ಣ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ, ಅಲೆಮಾರಿ ಜನಾಂಗಗಳಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಆ ಸಮುದಾಯದವರು ವಾಸಿಸುವ ಸ್ಥಳಗಳಿಗೆ ಹೋಗಿ ಪ್ರಚಾರ ಮಾಡಿ, ಸೌಲಭ್ಯಗಳನ್ನು ಒದಗಿಸಿಕೊಡಲು ಸಸಿಕಾಂತ್ ಸೆಂಥಿಲ್ ಸೂಚಿಸಿದರು.
ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯ ವಿಶೇಷ ಘಟಕ ಯೋಜನೆ(ಎಸ್‍ಸಿಪಿ) ಹಾಗೂ ಗಿರಿಜನ ಉಪಯೋಜನೆಯ(ಟಿಎಸ್‍ಪಿ) ಕಾರ್ಯಕ್ರಮಗಳ ನಿಗದಿತ ಅವಧಿಯಲ್ಲಿ ಗುರಿ ಸಾಧಿಸಬೇಕು. ವಿವಿಧ ಇಲಾಖೆಗಳು ಆಯಾ ತಾಲೂಕುಗಳಲ್ಲಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಅಡಿ ಕೈಗೊಳ್ಳುವ ಕಾಮಗಾರಿಗಳನ್ನು ಎಸ್‍ಸಿ/ಎಸ್‍ಟಿಗಳು ಇಲ್ಲದ ಕಡೆ ನಡೆಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಆ ಕಾಮಗಾರಿಗಳು ಎಸ್‍ಸಿ/ಎಸ್‍ಟಿ ಸಮುದಾಯದವರಿಗೆ ನಡೆಸಲಾಗುತ್ತಿದೆ ಎಂದು ದೃಡೀಕರಿಸಬೇಕು. ಇಲ್ಲವಾದಲ್ಲಿ, ಅವರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ, ಡಿಸಿಪಿ ಹನುಮಂತರಾಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಯೋಗೀಶ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಹೇಮಲತಾ, ವಿವಿಧ ಇಲಾಖೆಗಳ ಅಧಿಕಾರಿಗಳು, ಜಾಗೃತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Comments are closed.