ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿರುವ ನಟ ಪ್ರಕಾಶ್ ರೈ ಅವರು ಈಗ ಫೇಸ್ ಬುಕ್ ನಲ್ಲಿ ಸಿನಿರಂಗದ ಮತ್ತಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಶ್ರುತಿ ಹರಿಹರನ್ ಪ್ರಸಂಗ ಎಬ್ಬಿಸಿರುವ ಅಲೆಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಒಂದು ಹೆಣ್ಣಿನ ಬಾಯಿ ಮುಚ್ಚಿಸಲು ಅದೆಷ್ಟು ಮಂದಿ ಶೂರರು, ವೀರರು, ಪರಾಕ್ರಮಿಗಳು ಒಟ್ಟಾಗಿದ್ದಾರೆ. ಎಷ್ಟೊಂದು ಕಥೆಗಳನ್ನು ಹೆಣೆಯುತ್ತಿದ್ದಾರೆ. ಎಷ್ಟೋಂದು ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಇದನ್ನು ಎಡಪಂಥೀಯ ಪಿತೂರಿ ಅಂತ ಯಾರೋ ಕರೆದರಂತೆ. ಎಲ್ಲವನ್ನೂ ತಂದು ರಾಜಕೀಯದ ಕೊಂಬಿಗೆ ಕಟ್ಟಿ ಪಾರಾಗುವುದು ಈ ಕಾಲದ ಜಾಯಮಾನ. ಅದು ರಾಜಕೀಯ ಕಣ್ಣೀ… ಅಂದು ಬಿಟ್ಟರೆ ಅಲ್ಲಿಗೆ ಮುಗಿದುಹೋಯಿತು ಎಂದು ಪ್ರಕಾಶ್ ರೈ ಬರೆದುಕೊಂಡಿದ್ದಾರೆ.
ಹೆಣ್ಣು ತನಗೆ ಅನ್ಯಾಯ ಆಗಿದೆ ಎಂದಾಗ ಗಂಡು ಬಿಡಿ, ಹೆಣ್ಣು ಕೂಡ ಅದನ್ನು ಎಷ್ಟೋ ಸಲ ನಂಬುವುದಿಲ್ಲ. ಮತ್ತೊಬ್ಬ ಹೆಣ್ಣುಮಗಳು ಅದನ್ನು ವಿರೋಧಿಸುತ್ತಾಳೆ ಎಂದಿದ್ದಾರೆ.
“ಅರೇ ನನ್ನ ಜೊತೆ ಎಷ್ಟು ಚೆನ್ನಾಗಿ ಸಂಭಾವಿತರಂತೆ ನಡೆದುಕೊಂಡಿದ್ದಾರೆ. ಅಂಥವರು ಹೀಗೆ ಮಾಡಲು ಸಾಧ್ಯವೇ ಇಲ್ಲ ಎಂದು ತೀರ್ಪು ಕೊಟ್ಟುಬಿಡುತ್ತಾರೆ. ಅಲ್ಲಿಗೆ ಆ ಹೆಣ್ಣು ಖಳನಾಯಕಿಯಂತೆ ಕಾಣಿಸುತ್ತಾಳೇ” ಎಂದು ಬಹುಭಾಷಾ ನಟ ಬರೆದುಕೊಂಡಿದ್ದಾರೆ.
“ಅರ್ಜುನ್ ಸರ್ಜಾರನ್ನು ಸಮರ್ಥಿಸಿಕೊಳ್ಳಲು ಇವರೆಲ್ಲಾ ಎದ್ದು ಕೂತಿದ್ದಾರೆ ಅಂತ ನನಗೆ ಅನ್ನಿಸಿಲ್ಲ. ಅವರ ಉದ್ದೇಶ ಹೆಣ್ಣು ಮಾತನಾಡುವುದನ್ನು ಹೇಗಾದರೂ ಮಾಡಿ ತಡೆಯಬೇಕು ಅನ್ನುವುದು. ಯಾಕೆಂದರೆ ಸಿನಿಮಾ ಕ್ಷೇತ್ರದಲ್ಲಿರುವ ಮಹಿಳೆ ಮಾತಾಡಲು ಆರಂಭಿಸಿದರೆ ಯಾರ್ಯಾರ ಬಂಡವಾಳ ಹೊರಬೀಳುತ್ತದೋ ಹೇಳುವವರು ಯಾರು? ತನಗೆ ಸಂಬಂಧವೇ ಇಲ್ಲದೇ ಹೊದರೂ ನಿರ್ಮಾಪಕರ ಸಂಘ ಕಹಳೆ ಊದಿತು. ತನಗೆ ಸಂಬಂಧ ಇದ್ದರೂ ಕಲಾವಿದರ ಸಂಘ ಸುಮ್ಮನೆ ಕೂತುಬಿಟ್ಟಿತು. ವಾಣಿಜ್ಯ ಮಂಡಳಿಯೇ ದೇವಾಲಯ, ವಾಣಿಜ್ಯ ಮಂಡಳೀಯೇ ನ್ಯಾಯಾಲಯ ಅಂತ ಮತ್ತೊಬ್ಬರು ಇಡೀ ಪ್ರಸಂಗವನ್ನು ವಾಣಿಜ್ಯ ಮಂಡಳಿಯಲ್ಲೇ ತೀರ್ಮಾನಿಸಲು ಇಚ್ಛಿಸಿದರು.
“ಕೌರವವರು ಮತ್ತು ಅವರಿಗೆ ತಮ್ಮನ್ನು ಮಾರಿಕೊಂಡ ಪಾಂಡವರ ನಡುವೆ ನ್ಯಾಯ ಕೇಳಲು ನಿಂತ ದ್ರೌಪದಿಯ ಕತೆಯೂ ಇಲ್ಲಿ ನಡೆಯುತ್ತಿರುವುದಕ್ಕೂ ವ್ಯತ್ಯಾಸವೇ ಇಲ್ಲವಲ್ಲ” ಎಂದಿದ್ದಾರೆ ಪ್ರಕಾಶ್ ರೈ.
“ಅರ್ಜುನ್ ಸರ್ಜಾ ಕ್ಷಮೆ ಕೇಳಬಹುದಾಗಿತ್ತು ಅಂತ ನಾನು ಹೇಳಿದಾಗ ಜಗತ್ತು ನನ್ನ ಮೇಲೆ ತಿರುಗಿಬಿದ್ದಿತು. ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ ಅಂತ ನಾನೆಂದೂ ಹೇಳಿರಲಿಲ್ಲ. ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂಬ ಭಾವವನ್ನು ನಿನ್ನಲ್ಲಿ ಹುಟ್ಟಿಸಿದ್ದರೆ ಕ್ಷಮಿಸಿ ಅಂತ ಒಂದು ಕ್ಷಮಾಪಣೆಯನ್ನು ಮುಂದಿಡುವುದು ಆರೋಗ್ಯವಂಥ ಜೀವದ ಮೊದಲ ಲಕ್ಷಣ.”
“ಸಿನಿಮಾದಲ್ಲಿ ಯಾವ ಕಾರಣಕ್ಕೋ ಯಾವ ಹೊತ್ತಿನಲ್ಲೋ ಯಾವುದೋ ಒಂದು ಸ್ಪರ್ಶ ಕೆಟ್ಟದ್ದು ಅಂತ ನಾಯಕಿಗೂ ಅನಿಸಿರಬಹುದು. ನಾಯಕನಿಗೂ ಅನಿಸಿರಬಹುದು. ಅದನ್ನು ಒಬ್ಬಾಕೆ ಹೇಳಿದಾಗ, ಹೌದೇ, ಹಾಗೇನಾದರೂ ಆಗಿದ್ದರೆ ಅದು ಉದೇಶಪೂರ್ವಕ ಅಲ್ಲ, ನನಗದು ಗೊತ್ತೂ ಆಗಲಿಲ್ಲ ಎಂದುಬಿಡುವುದಕ್ಕೆ ಅಹಂಕಾರ ಯಾಕೆ ಅಡ್ಡಿಬರಬೇಕು?” ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಮನೋರಂಜನೆ
Comments are closed.