ಕರಾವಳಿ

ಬಸ್ರೂರು ಪೆಟ್ರೋಲ್ ಬಂಕ್‌ನಲ್ಲಿ ಗೋಕಳ್ಳರ ಅಟ್ಟಹಾಸ ಪ್ರಕರಣ: ಓರ್ವ ಬೈಂದೂರಿನಲ್ಲಿ ಅಂದರ್!

Pinterest LinkedIn Tumblr

ಕುಂದಾಪುರ: ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯನ್ನೇಬೆಚ್ಚಿ ಬೀಳಿಸಿದ ಘಟನೆಯಿದು. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆಯೇ ಇದ್ದ ಪೆಟ್ರೋಲ್ ಬಂಕ್ ಒಂದಕ್ಕೆ ತಡರಾತ್ರಿ ನುಗ್ಗುವ ನಾಲ್ವರು ಮುಸುಕುಧಾರಿಗಳು ಅಲ್ಲಿದ್ದ ಬಿಡಾಡಿ ದನಗಳನ್ನು ಹೊತ್ತೊಯ್ಯಲು ಯತ್ನಿಸಿದ್ದು ಇದೆಲ್ಲಾ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಕಂಡ್ಲೂರು ನಿವಾಸಿ ಕೆ.ಎಂ ಫಹಾದ್  ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ಬಂಧಿಯಾಗಿದ್ದಾನೆ.

ನಿನ್ನೆ ಆಗಿದ್ದೇನು?
ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಪಿ‌ಎಸ್‌ಐ ತಿಮ್ಮೇಶ್ ಬಿ.ಎನ್ ಅವರಿಗೆ ಕರೆಯೊಂದು ಬಂದಿದ್ದು ಶಿರೂರು ಕರಿಕಟ್ಟೆ ಎಂಬಲ್ಲಿ ಬಿಳಿ ಬಣ್ಣದ ಟವೇರ ಕಾರಿನಲ್ಲಿ ಬಂದ ನಾಲ್ಕು ಜನ ಯುವಕರು ಜಾನುವಾರುಗಳನ್ನು ಕಳವು ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಅದಾಗಿತ್ತು. ಕೂಡಲೇ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ವೇಳೆ ಈ ನಾಲ್ವರು ಯುವಕರು ದನವನ್ನು ಸುತ್ತುವರಿದು ಹಿಡಿಯಲು ಸ್ಕೆಚ್ ರೂಪಿಸಿದ್ದರು. ಪೊಲಿಸರು ಬಂದ ಕೂಡಲೇ ಪರಾರಿಯಾಗಲು ಯತ್ನಿಸಿದ ನಾಲ್ವರ ಪೈಕಿ ಓರ್ವನನ್ನು ಬಂಧಿಸಿದ್ದು ಮೂವರು ಪರಾರಿಯಾಗಿದ್ದರು.

ಕಾವ್ರಾಡಿ ಗ್ರಾಮದ ಕಂಡ್ಲೂರು ನಿವಾಸಿ ಕೆ.ಎಮ್ ಫಹಾದ್ (19) ಬಂಧಿತ ಆರೋಪಿ. ನಯೀಮ್ ಕಂಡ್ಲೂರು, ಅಜೀಮ್ ಭಟ್ಕಳ, ಇಫ್ಜಾಲ್ ಭಟ್ಕಳ ಪರಾರಿಯಾದವರು. ಕೃತ್ಯಕ್ಕೆ ಬಳಸಿದ ಎರಡು ಲಕ್ಷ ಮೌಲ್ಯದ ಟವೇರ ಕಾರು, ಹುರಿಹಗ್ಗ ಹಾಗೂ 1 ಕತ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು ಪರಾರಿಯಾದವರ ಬಂಧನಕ್ಕೆ ಬಲೆಬೀಸಲಾಗಿದೆ.

ಆಗಸ್ಟ್ 6 ರಂದು ಬಸ್ರೂರಿನಲ್ಲಿ ಅಟ್ಟಹಾಸ!
ಆಗಸ್ಟ್ 6 ರಂದು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್‌ನಲ್ಲಿ ನಾಲ್ವರು ಮುಸುಕುಧಾರಿ ಗೋಕಳ್ಳರು ದನಕಳವಿಗೆ ಬಂದು ಅಟ್ಟಹಾಸ ಮೆರೆದಿದ್ದರು. ಅದು ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದರು. ಬಂಧಿತ ಫಹಾದ್ ಸೇರಿದಂತೆ ನಯೀಮ್ ಕೂಡ ಈ ಅಟ್ಟಹಾಸದ ಕುಕೃತ್ಯದಲ್ಲಿದ್ದವರು.

ಕಂಡ್ಲೂರು-ಬೈಂದೂರು!
ಬಸ್ರೂರು ಘಟನೆ ಬಳಿಕ ಗ್ರಾಮಾಂತರ ಠಾಣೆ ಪಿ‌ಎಸ್‌ಐ ಶ್ರೀಧರ್ ನಾಯ್ಕ್ ಆರೋಪಿಗಳ ಶೋಧಕ್ಕೆ ತಂಡ ರಚಿಸಿದ್ದರು. ಪೊಲೀಸರು ಬೆನ್ನತ್ತಿದ್ದಾರೆಂಬುದು ತಿಳಿಯುತ್ತಲೇ ಫಹಾದ್ ಹಾಗೂ ಇತರೇ ಮೂವರು ಎಚ್ಚೆತ್ತಿದ್ದು ಸೆಶನ್ಸ್ ಕೋರ್ಟಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅದು ತಿರಸ್ಕ್ರತಗೊಂಡಿತ್ತು. ಬಳಿಕ ಹೈಕೋರ್ಟಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಎಲ್ಲರೂ ತಲೆ ಮರೆಸಿಕೊಂಡಿದ್ದರು. ಇವರ ಪೈಕಿ ಸದ್ಯ ಒಬ್ಬ ಸಿಕ್ಕಿ ಹಾಕಿಕೊಂಡಿದ್ದಾನೆ.

ಸದ್ಯ ಬಂಧಿತನನ್ನು ಬಾಡಿ ವಾರಂಟ್ ಪಡೆದು ಗ್ರಾಮಾಂತರ ಠಾಣೆ ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ.

(ವರದಿ-ಯೋಗೀಶ್ ಕುಂಭಾಸಿ)

Comments are closed.