ಕರಾವಳಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಂದೊಂದು ದಿನ ಭಾರತದ ರಾಷ್ಟ್ರಪತಿಗಳಾಗೋದು ಖಂಡಿತ : ಪೂಜಾರಿ ಭವಿಷ್ಯ

Pinterest LinkedIn Tumblr

ಮಂಗಳೂರು: ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿಯವರು ಮುಂದೆ ಭಾರತದ ರಾಷ್ಟ್ರಪತಿಯಾಗುವರು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ ಮಂಗಳೂರು ದಸರಾ ಮಹೋತ್ಸವ ಉದ್ಘಾಟನೆಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವೇದಿಕೆಯಲ್ಲಿರುವಾಗಲೇ ಸಭೆಯನ್ನುದ್ದೇಶಿಸಿ ಮಾತನಾಡಿದ ಪೂಜಾರಿ ಅವರು, ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಗಳಾಗೋದು ಖಂಡಿತ. ನಾನು ದೇವರ ಸಮಕ್ಷಮ ಈ ಮಾತನ್ನು ಹೇಳಿರುವೆನು. ಕುಮಾರಸ್ವಾಮಿ ರಾಷ್ಟ್ರಪತಿ ಆಗುವಾಗ ನಾನು ಇರಲ್ಲ. ಆದರೆ, ರಾಷ್ಟ್ರಪತಿಯಾದಾಗ ದೇವರ ಸಮ್ಮುಖದಲ್ಲಿ ಪೂಜಾರಿ ಹೇಳಿದ ಮಾತು ನೆನಪಿಸಿಕೊಳ್ಳಿ ಎಂದು ಹೇಳಿದರು.

ಪ್ರಧಾನಿಯಾಗಲು ಎಲ್ಲರಿಗೂ ಸಾಧ್ಯವಿಲ್ಲ. ಅದು ಪೂರ್ವಜನ್ಮದ ಪೂರ್ವಜರ ಪುಣ್ಯದಿಂದ ಸಾಧ್ಯ. ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಅವರಲ್ಲಿ ಸಹನೆ, ವಿನಯ ಇದೆ. ದೇಶದ ಚರಿತ್ರೆಯಲ್ಲಿ ದೇವೇಗೌಡರ ಪಾತ್ರ ಬಹಳ ದೊಡ್ಡದು. ದೇವೇಗೌಡರೇ, ನಿಮ್ಮ ಮಗ ನಮ್ಮ ದೇವಳಕ್ಕೆ ಬಂದು ದೇವರಿಗೆ ಕೈಮುಗಿದರು.. ಕುಮಾರಸ್ವಾಮಿಯವರಲ್ಲಿ ನಾನು ವಿಶೇಷತೆ‌ಯನ್ನು ಕಂಡಿದ್ದೇನೆ. ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಗಳಾಗೋದು ಖಂಡಿತ ಎಂದು ಭವಿಷ್ಯ ನುಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ದಸರಾ ಉದ್ಘಾಟಿಸಿದ್ದರಿಂದ ಎಂದಿಗೂ ಸಿಗದಂತಹ ತೃಪ್ತಿ ನನಗಿಂದು ದೊರಕಿದೆ. ದೇವೇಗೌಡರು ಎಲ್ಲಿ ನೋಡಿದರೂ ನನ್ನನ್ನು ಗುರುಗಳೇ ಅನ್ನುತ್ತಿದ್ದರು. ಕುದ್ರೋಳಿ ಕ್ಷೇತ್ರ ನಿರ್ಮಾಣವಾದ ಪರಿಯ ಬಗ್ಗೆ ಹೊಗಳುತ್ತಿದ್ದರು.ದೇವೇಗೌಡರು ಈ ಹಿಂದೆ ಕುದ್ರೋಳಿ ಶ್ರೀ ಕ್ಷೇತ್ರದ ಬಗ್ಗೆ ಶ್ಲಾಘನೆಯ ಮಾತಾಡಿದ್ದನ್ನು ಈ ಸಂದರ್ಭ ಅವರು ನೆನಪಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೋಟ ಶ್ರೀನಿವಾಸ ಪುಜಾರಿ, ರಾಜೇಶ್ ನಾಯ್ಕಾ, ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಭೋಜೇಗೌಡ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ, ಮನಪಾ ಮೇಯರ್ ಭಾಸ್ಕರ ಕೆ, ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಖಜಾಂಜಿ ಪದ್ಮ ರಾಜ್ ಆರ್, ಕಾರ್ಯದರ್ಶಿ ಮಾಧವ ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಪದಾಧಿಕಾರಿಗಳಾದ ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರ್, ಕೆ. ಮಹೇಶ್‌ಚಂದ್ರ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜೆ.ಸುವರ್ಣ, ಡಾ. ಅನಸೂಯ ಬಿ.ಟಿ, ರಾಧಾಕೃಷ್ಣ, ಹರಿಶ್ಚಂದ್ರ, ಡಿ.ಡಿ.ಕಟ್ಟೆಮಾರ್, ದೇವೇಂದ್ರ ಪುಜಾರಿ, ಶೇಖರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಧಾರಕಾರ ಮಳೆಯನ್ನು ಲೆಕ್ಕಿಸದೇ ಸಿಎಂಗಾಗಿ ಕಾದು ಕುಳಿತ ಪೂಜಾರಿ :

ಕಾರ್ಯಕ್ರಮಕ್ಕೂ ಮುನ್ನ ಜನಾರ್ದನ ಪೂಜಾರಿಯವರು ಧಾರಕಾರವಾಗಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಸ್ವಾಗತಿಸಲು ಕುದ್ರೋಳಿ ಶ್ರೀ ಕ್ಷೇತ್ರದ ಗೇಟಿನ ಮುಂಭಾಗ ಕೊಡೆಹಿಡಿದು ಕುರ್ಚಿಯಲ್ಲಿ ಕಾದು ಕುಳಿತಿದ್ದರು.

Comments are closed.