ಕರಾವಳಿ

ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಉಡುಪಿ ಹಾಗೂ ದ.ಕ.ಜಿಲ್ಲೆಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 04: : ಅರಬಿ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತ ವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ಇದರಿಂದ ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಲಿದೆ. ವೇಗದ ಗಾಳಿ-ಮಳೆ ಬೀಸಲಿದೆ. ಈ ವೇಳೆ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಉಡುಪಿ ಹಾಗೂ ದ.ಕ.ಜಿಲ್ಲೆಯ ಮೀನುಗಾರರು ಅ.10ರವರೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಹಾಗೂ ಈಗಾಗಲೇ ತೆರಳಿದವರು ಕೂಡಲೇ ಹಿಂದಿರುಗುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಎಲ್ಲ ಲಕ್ಷಣಗಳಿದ್ದು, ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ದಡಕ್ಕೆ ವಾಪಸಾಗಲು ಸೂಚನೆ ನೀಡಿ ಎಚ್ಚರಿಸಲಾಗಿದೆ. ಸೂಚನೆ ಹಿನ್ನೆಲೆ ಮೀನುಗಾರಿಕೆಗೆ ತೆರಳಿದ್ದ ಕರಾವಳಿಯ 300ಕ್ಕೂ ಹೆಚ್ಚು ಬೋಟ್ ಗಳು ದಡಕ್ಕೆ ವಾಪಸಾಗಿವೆ

ಅ. 6ರಿಂದ 8ರವರೆಗೆ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವವಿರುವುದರಿಂದ ಎಲ್ಲ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಬಾರದು. ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ಬೋಟ್ ಗಳು ಅ.5ರೊಳಗೆ ದಡ ಸೇರುವಂತೆ ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದವು. ಈ ಸಂದೇಶವನ್ನು ಮೀನುಗಾರಿಕೆ ಸಂಘದ ಅಧ್ಯಕ್ಷರು ಎಲ್ಲ ಮೀನುಗಾರರಿಗೆ ರವಾನಿಸಿದ್ದಾರೆ.

ಚಂಡಮಾರುತದ ಪರಿಣಾಮಗಳು ಅ.8ರಿಂದ 10ರವರೆಗೆ ಇರಲಿವೆ. ಈ ವೇಳೆ ಸಮುದ್ರ ಪ್ರಕ್ಷುಬ್ಧವಾಗಲಿದ್ದು, ಭಾರೀ ಗಾತ್ರದ ಅಲೆಗಳು ಏಳಲಿವೆ. ಇದರಿಂದ ಕೇರಳ, ಪಶ್ಚಿಮ ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಈಗಾಗಲೇ ದಡಕ್ಕೆ ಬಂದಿರುವ ಮೀನುಗಾರಿಕಾ ದೋಣಿಗಳಿಗೆ ಅ.10ರವರೆಗೆ ಮತ್ತೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಸಮುದ್ರ ಮಧ್ಯದಲ್ಲಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ನಿರತವಾಗಿರುವ ಬೋಟು ಗಳಿಗೂ ಸೂಚನೆಗಳನ್ನು ರವಾನಿಸಲಾಗುತ್ತಿದೆ. ಅ.5-6ರೊಳಗೆ ಎಲ್ಲರೂ ಬಂದರಿಗೆ ಮರಳುವಂತೆ ತಿಳಿಸಲಾಗಿದೆ.

ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ 700ಕ್ಕೂ ಹೆಚ್ಚು ಬೋಟ್ ಗಳು ಶುಕ್ರವಾರ ದಡಕ್ಕೆ ವಾಪಸಾಗಿವೆ. ಬಂದರ್ ಹಾಗೂ ಹಾರ್ಬರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹವಾಮಾನ ವೈಫರಿತ್ಯದ, ಚಂಡಮಾರುತದ ಪೂರ್ವಸೂಚನೆಗಳು ಸಿಕ್ಕಿದರೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟುಗಳು ಇಲ್ಲಿನ ಮಾಹಿತಿ ಸಿಗದಿದ್ದರೂ ಕೂಡಲೇ ಹಿಂದಿರುಗಿ ಬರಲಿವೆ.

ಪರ್ಸಿನ್ ಹಡಗುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಸಮುದ್ರದಲ್ಲಿ ದಡದಿಂದ ಒಂದು ಗಂಟೆಯ ಪ್ರಯಾಣದ ದೂರದಲ್ಲಿ ಮೀನುಗಾರಿಕೆಯನ್ನು ಮಾಡುತ್ತಾರೆ. ಅಂತಹವರು ಮೊಬೈಲ್ ಮೂಲಕ ಸಂಪರ್ಕಕ್ಕೆ ಸಿಗುತ್ತಾರೆ. ಈ ಬಗ್ಗೆ ನಿರಂತರವಾಗಿ ಸಂದೇಶ ನೀಡಲಾಗುತ್ತದೆ.

Comments are closed.