ಕರಾವಳಿ

ಸೆಪ್ಟೆಂಬರ್ 15: ಕವಿತಾ ಟ್ರಸ್ಟ್‌ನಿಂದ (ಗುಜರಾತಿ ಕವಿ ಮತ್ತು ಸಾಹಿತಿ ಪ್ರಬೋಧ್ ಪಾರಿಖ್‌ರಿಂದ) ಕವಿತಾ ದತ್ತಿ ಉಪನ್ಯಾಸ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.13 : ಕೊಂಕಣಿ ಕಾವ್ಯ ಕ್ಷೇತ್ರದ ಹಿರಿಮೆಗಾಗಿ ದುಡಿಯುತ್ತಿರುವ ಕವಿತಾ ಟ್ರಸ್ಟ್ ಆಯೋಜಿಸುವ ಏಳನೇ ವರ್ಷದ ಜೇಮ್ಸ್ ಮತ್ತು ಶೋಭಾ ಮೆಂಡೊನ್ಸಾ ಕವಿತಾ ದತ್ತಿ ಉಪನ್ಯಾಸವು 2018 ಸೆಪ್ಟೆಂಬರ್ 15ರಂದು ಬೆಂದೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಸಭಾಂಗಣದಲ್ಲಿ ಅಪರಾಹ್ನ 4.30 ಗಂಟೆಯಿಂದ ನಡೆಯಲಿರುವುದು. ಗುಜರಾತಿ ಕವಿ ಮತ್ತು ಸಾಹಿತಿ ಪ್ರಬೋಧ್ ಪಾರಿಖ್ ಈ ಉಪನ್ಯಾಸ ನಡೆಸಿ ಕೊಡುವರು.

ತತ್ವಶಾಸ್ತ್ರದ ನಿವೃತ್ತ ಉಪನ್ಯಾಸಕರಾಗಿರುವ ಪಾರಿಖ್ ಪ್ರಸ್ತುತ ಮುಂಬಯಿಯ ಚಲನಚಿತ್ರ ಸಂಬಂಧಿ ಎರಡು ಸಂಸ್ಥೆಗಳ ಪ್ರಮುಖರಾಗಿದ್ದು ಕಲೆ, ಸಿನೆಮಾ ಮತ್ತು ಸಾಹಿತ್ಯದ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ನೀಡುತ್ತಿರುತ್ತಾರೆ. ಭಾರತ ಸಂಸ್ಕೃತಿ ಮಂತ್ರಾಲಯ, ಐಸಿ‌ಎಸ್‌ಎಸ್‌ಆರ್, ಸಾಹಿತ್ಯ ಅಕಾಡೆಮಿ, ನ್ಯಾಶನಲ್ ಗ್ಯಾಲರಿ ಆಫ್ ಮೊಡರ್ನ್ ಆರ್ಟ್ ಇವುಗಳ ಪರವಾಗಿ ರವೀಂದ್ರನಾಥ್ ಠಾಗೋರ್ ಇವರ ಕಲೆ ಮತ್ತು ಸಾಹಿತ್ಯದ ಬಗ್ಗೆ ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೇನ್, ಜರ್ಮನಿ ಹಾಗೂ ಡೆಲ್ಲಿ, ಮುಂಬಯಿ, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಉಪನ್ಯಾಸ ನೀಡಿದ್ದಾರೆ.

ಗುಜರಾತಿ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ಬರೆದಿರುವ ಅವರ ಕತೆ, ಕವಿತೆ ಮತ್ತು ಪತ್ರಲೇಖನ ಸಂಕಲನಗಳು ಪ್ರಕಟವಾಗಿವೆ. ಅವರಿಗೆ ಹಲವಾರು ಪುರಸ್ಕಾರಗಳು ದೊರೆತಿವೆ.

2002 ರಲ್ಲಿ ಸ್ಥಾಪನೆಗೊಂಡ ಕವಿತಾ ಟ್ರಸ್ಟ್, ಕೊಂಕಣಿ ಕವಿತೆಗೆ ಉನ್ನತ ದರ್ಜೆ, ಮಕ್ಕಳು ಮತ್ತು ಯುವಜನತೆಗೆ ಕಾವ್ಯದ ರುಚಿ ಹಾಗೂ ಜನಸಾಮಾನ್ಯರೆಡೆಗೆ ಕೊಂಕಣಿ ಕವಿತೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ನಿರಂತರತೆಯನ್ನು ಕಾಯ್ದುಕೊಂಡು ಬಂದಿದೆ. ಕವಿತೆ ಬರೆಯುವ ಮತ್ತು ವಾಚನ ಸ್ಪರ್ಧೆಗಳು, ಕವಿಗೋಷ್ಟಿ, ಕವಿತಾ ಫೆಸ್ತ್, ಪುರಸ್ಕಾರಗಳು, ಪ್ರಕಟಣೆಗಳು ಹೀಗೆ ಕಳೆದ 16 ವರ್ಷಗಳಲ್ಲಿ 153 ಕಾವ್ಯ ಸಂಬಂಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅಂತರಜಾಲದಲ್ಲಿ ಕೊಂಕಣಿ ಕವಿತೆ ಪ್ರಚುರಪಡಿಸಿದೆ.

2012ರಿಂದ ನಡೆಯುವ ಈ ದತ್ತಿ ಉಪನ್ಯಾಸದಲ್ಲಿ ಗುಲ್ಜಾರ್, ಅಶೋಕ್ ವಾಜಪೇಯಿ, ಜೆರಿ ಪಿಂಟೊ, ಆರುಂಧತಿ ಸುಬ್ರಹ್ಮಣಿಯಮ್, ಕೇಕಿ ದಾರುವಾಲಾ ಮತ್ತು ಸಿತಾಂಶು ಯಶಸ್ಚಂದ್ರ ಇಂತಹ ಕಾವ್ಯಕ್ಷೇತ್ರದ ಘಟಾನುಘಟಿಗಳು ಉಪನ್ಯಾಸ ನೀಡಿದ್ದಾರೆ.

Comments are closed.