ಕರಾವಳಿ

ಬಿಜೆಪಿ ‘ಆಪರೇಶನ್ ಕಮಲ’ ಮಾಡಿಲ್ಲ; ಪಕ್ಷಕ್ಕೆ ಬರುವ ಎಂ.ಎಲ್.ಎ.ಗಳಿಗೆ ಸ್ವಾಗತ: ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಸಿ.ಎಂ. ಕುಮಾರಸ್ವಾಮಿಗೆ ಹೆಚ್ಚು ಬೆಂಬಲ ಕೊಟ್ಟರೆ ಕಾಂಗ್ರೆಸ್ ಅಸ್ತಿತ್ವ ಉಳಿಯಲ್ಲ ಎಂಬ ಆತಂಕ ಸದ್ಯ ವಿದೇಶದಲ್ಲಿರುವ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರಿಗೆ ಬಹಳ ತಡವಾಗಿ ತಿಳಿದಿದ್ದು ಅದರಿಂದಲೇ ಆಪರೇಶನ್ ಕಮಲದ ಬಗ್ಗೆ ಹೇಳಿಕೆಗಳು ಜಾಸ್ಥಿಯಾಗಿದೆ. ಆಪರೇಶನ್ ಕಮಲವನ್ನು ಬಿಜೆಪಿ ಈವರೆಗೂ ಮಾಡಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಂದಾಪುರದ ಶ್ರೀ ವ್ಯಾಸರಾಜ ಮಠ ಸಂಸ್ಥಾನದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ದರ್ಶನ ಪಡೆದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಯಾರೇ ಬಿಜೆಪಿಗೆ ಬಂದರು ಸ್ವಾಗತ!
ಕುಂದ ನಾಡು ಬೆಳಗಾವಿಯ ರಾಜಕಾರಣ ಕನಕಪುರದ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಅವರಲ್ಲಿಯೇ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾರಕಿ ಹೊಳೆ ಸಹೋದರರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆಯೆಂದು ಹೇಳಿಕೆ ನೀಡಿದ್ದು ಬೆಳಗಾವಿ ರಾಜಕಾರಣದಲ್ಲಿ ಅನ್ಯರ ಪ್ರವೇಶವಾಗುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಆಂತರಿಕ ಸಮಸ್ಯೆಯಾಗಿದ್ದು ಅವರ ಈ ವಿವಾದಗಳಿಗೆ ಬಿಜೆಪಿ ಹೊಣೆಯೇ ಅಲ್ಲ. ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವ ನಿಟ್ಟಿನಲ್ಲಿ ಜಾರಕಿಹೊಳೆ ಸಹಿತ ಯಾರೇ ಬಿಜೆಪಿಗೆ ಬೆಂಬಲ ನೀಡಿದರೆ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಮತ್ತು ಆಹ್ವಾನವಿದೆ ಎಂದು ಬೇರೆ ಪಕ್ಷದ ಶಾಸಕರಿಗೆ ಕೋಟ ಪರೋಕ್ಷವಾಗಿ ಆಹ್ವಾನ ನೀಡಿದರು.

ದೋಸ್ತಿ ಸರಕಾರ ಉರುಳಬೇಕು..!
ಚೌತಿ ಬಳಿಕ ದೋಸ್ತಿ ಸರಕಾರ ಉರುಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವಾಗಲೋ ದೋಸ್ತಿ ಸರಕಾರ ಉರುಳಬೇಕಿತ್ತು. ಇಷ್ಟು ಸಮಯ ಈ ಸರಕಾರ ಇದ್ದಿದ್ದೇ ತಪ್ಪು, ಚೌತಿ ಶುಭ ವೇಳೆ ಉರುಳಿದರೆ ಅದಕ್ಕೂ ನಮ್ಮ ಸ್ವಾಗತವಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

ಬಿಜೆಪಿ ಶಾಸಕರನ್ನು ಹೈಜಾಕ್ ಮಾಡಲಾಗಲ್ಲ….!
ಚುನಾವಣೆ ಮತ್ತು ರಾಜಕಾರಣದ ತಂತ್ರಗಾರಿಕೆಯಲ್ಲಿ ಬಿಜೆಪಿ ಶಾಸಕರಿಗೆ ಯಾರಾದರೂ ತೊಂದರೆ ಕೊಡಬಹುದು ಎಂಬ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರು ಬಿಜೆಪಿ ಶಾಸಕರಿಗೆ ತಿಳಿವಳಿಕೆ ನೀಡಿದ್ದಾರೆ. ಬಿಜೆಪಿಯ ಯಾವುದೇ ಶಾಸಕರನ್ನು ಕದಲಿಸಲಾಗಲ್ಲ. ಕೈ ಹಾಗೂ ತೆನೆ ಪಕ್ಷದ ಯಾವುದೇ ತಂತ್ರಗಾರಿಕೆ ಬಿಜೆಪಿ ಬಳಿ ನಡೆಯಲ್ಲ ಎಂದು ಖಡಕ್ ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಎಸ್.ವೈ. ಮುಖ್ಯಮಂತ್ರಿ ಆಗುತ್ತಾರೆ..
ಪ್ರಜಾಪ್ರಭುತ್ವದಲ್ಲಿ ಜನರು ಅತಿ ಹೆಚ್ಚು ಬೆಂಬಲ ನೀಡಿ ಬಿಜೆಪಿಯ ೧೦೪ ಮಂದಿಯನ್ನು ಚುನಾಯಿಸಿದ್ದು ಒಂದೆಡೆಯಾದರೆ ೩೭ ಜನ ಶಾಸಕರನ್ನು ಹೊಂದಿದ ಪಕ್ಷ ಸರಕಾರ ಮಾಡಿ ಆ ವ್ಯಕ್ತಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು ಅಧಿಕಾರದ ಆಸೆಯಲ್ಲವೇ ಎಂದು ಪ್ರಶ್ನಿಸಿದ ಕೋಟ ಬಿಜೆಪಿಗೆ ಬೆಂಬಲ ನೀಡಿದರೆ ನಮ್ಮ ಪಕ್ಶ್ಜ ಅಧಿಕಾರಕ್ಕೆ ಬಂದು ಬಿ.ಎಸ್.ವೈ ಸಿಎಂ ಆಗಬೇಕೆನ್ನುವ ಹಂಬಲ ನಮ್ಮದು ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.