ಕರಾವಳಿ

ರೈತರ ಸಮಸ್ಯೆಗಳ ಬಗ್ಗೆ ಸಂಶೋಧನೆ ಮಾಡುವ ಮೂಲಕ ಸಂಬಂಧಪಟ್ಟವರ ಕಣ್ತೆರೆಸುವ ಕೆಲಸ ಮಾಡಿ : ಸಚಿವ ವೆಂಕಟರಾವ್ ನಾಡಗೌಡ

Pinterest LinkedIn Tumblr

ಮಂಗಳೂರು, ಜುಲೈ.18: ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೀದರ್ ಇದರ ಅಧೀನದಲ್ಲಿರುವ ಮಂಗಳೂರು ಮೀನುಗಾರಿಕೆ ಮಹಾ ವಿದ್ಯಾಲಯದ ‘ಸುವರ್ಣ ಮಹೋತ್ಸವ’ದ ಪ್ರಯುಕ್ತ ‘ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ’ ಅಂಗವಾಗಿ ‘ಸಮಸ್ಯಾತ್ಮಕ ಮಣ್ಣಿನ ಆನ್ವಯಿಕ ಸಂಶೋಧನಾ ಕೇಂದ್ರ-ಸಂಚಾರಿ ಮಣ್ಣು ಮತ್ತು ನೀರು ಪ್ರಯೋಗಾಲಯ’ವನ್ನು ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಇಂದು ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ಪರಿಹಾರಕ್ಕೆ ಯಾವ ಸರಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಈ ಸಂದರ್ಭ ಸಂಶೋಧನಾರ್ಥಿಗಳು ಕೇವಲ ಸಂಶೋಧನೆಗೋಸ್ಕರ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡದೆ ರೈತರ ನಿಜವಾದ ಸಮಸ್ಯೆ ಏನು ಎಂದು ಅರ್ಥ ಮಾಡಿಕೊಂಡು ಆ ನಿಟ್ಟಿನಲ್ಲಿ ಸಂಶೋಧನೆ ಮಾಡುವ ಮೂಲಕ ಸಂಬಂಧಪಟ್ಟವರ ಕಣ್ತೆರೆಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಸರಕಾರವು ರೈತರ ಸಾಲ ಮನ್ನಾ ಮಾಡುತ್ತಿರುವುದು ಶಾಶ್ವತ ಪರಿಹಾರವಲ್ಲ. ಅದೊಂದು ತಾತ್ಕಾಲಿಕ ಪರಿಹಾರವಾಗಿದೆ. ರೈತರಿಗೆ ಬೆಂಬಲ ಬೆಲೆ ನೀಡುವುದರೊಂದಿಗೆ ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಿಕೊಂಡು ಸ್ವಾವಲಂಬಿ ಬದುಕು ಸಾಗಿಸುವ ಪ್ರಯತ್ನ ನಡೆಯಬೇಕಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ವಹಿಸಿದ್ದರು. ವೇದಿಕೆಯಲ್ಲಿ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿವಿ ಕುಲಪತಿ ಡಾ.ಎಚ್.ಡಿ.ನಾರಾಯಣ ಸ್ವಾಮಿ, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿವಿ ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ಬೀರಾದರ್, ಲುಂಬಿಣಿ ಗೌತಮ್, ಈರೇಶ್ ಅಂಚಟಗೇರಿ, ಡಾ. ವೆಂಕಟ ರೆಡ್ಡಿ, ಮುಕುಂದ ವರ್ಮ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ಎಚ್.ಎಸ್.ವೀರಪ್ಪಗೌಡ, ಭಾರತೀಯ ಮಣ್ಣು ಸರ್ವೇಕ್ಷಣಾ ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರ ರಾಮಕೃಷ್ಣ ಹೆಗಡೆ, ವಿವಿ ಕುಲಸಚಿವ ಡಾ.ಎಚ್.ಶಿವಾನಂದ ಮೂರ್ತಿ, ವಿವಿಯ ಮಾಜಿ ನಿರ್ದೇಶಕ ಎಸ್.ಎಲ್. ಶಾನ್‌ಬೋಗ್, ಕೃಷಿಕ ಸಮಾಜದ ಸಂಪತ್ ಸಾಮ್ರಾಜ್ಯ, ಪಶು ಸಂಗೋಪನಾ ಇಲಾಖೆಯ ಅಪರ ನಿರ್ದೇಶಕ ಡಾ.ಕೆ.ವಿ. ಹಳಗಪ್ಪ, ಹಣಕಾಸು ನಿಯಂತ್ರಣಾಧಿಕಾರಿ ಕೆ.ಎಲ್.ಸುರೇಶ್, ವಿವಿ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಪ್ಪ ಉಪಸ್ಥಿತರಿದ್ದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಕುಮಾರ್ ಮಗದ ಸ್ವಾಗತಿಸಿದರು. ಡಾ.ಗಂಗಾಧರ ಗೌಡ ಮನವಿ ವಾಚಿಸಿದರು. ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಂ.ಎನ್. ವೇಣುಗೋಪಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Comments are closed.