ಕರಾವಳಿ

ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ತರಲು ಚಿಂತನೆ : ಮಂಗಳೂರಿನಲ್ಲಿ ಸಚಿವ ನಾಡಗೌಡ

Pinterest LinkedIn Tumblr

ಸಚಿವರಿಂದ ಮೀನುಗಾರಿಕಾ ಬಂದರಿನ ಎಲ್ಲಾ ಘಟಕಗಳಿಗೆ, ಜೆಟ್ಟಿ ಸ್ಥಾವರ, ಮಂಜುಗಡ್ಡೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ

ಮಂಗಳೂರು ಜುಲೈ 18 : ಮೀನುಗಾರಿಕಾ ಬೋಟುಗಳಿಗೆ ನೀಡಬೇಕಾದ ಬಾಕಿ ಡೀಸೆಲ್ ಸಬ್ಸಿಡಿಯನ್ನು ಮುಂದಿನ ಒಂದು ವಾರದೊಳಗೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ಅವರು ಮಂಗಳವಾರ ನಗರದ ಧಕ್ಕೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ, ಮೀನುಗಾರ ಮುಖಂಡರ ಅಹವಾಲುಗಳನ್ನು ಆಲಿಸಿ ಮಾತನಾಡಿದರು. ಬಾಕಿ ಡೀಸೆಲ್ ಸಬ್ಸಿಡಿ ಕುರಿತು ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಬಾಕಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ವಿಸ್ತರಣೆಯ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಹೆಚ್ಚುವರಿ ಅನುದಾನ ಅಗತ್ಯವಿದ್ದು, ಇದಕ್ಕೆ ಅನುಮತಿ ನೀಡಲಾಗುವುದು. ಈ ಯೋಜನೆಗೆ ರಾಜ್ಯ ಸರಕಾರದ ಅನುದಾನ ಬಿಡುಗಡೆಯಾಗಿದ್ದು, ಕೇಂದ್ರ ಸರಕಾರದ ಪಾಲಿನ ಅನುದಾನ ಬಿಡುಗಡೆಯಾಗಬೇಕಿದೆ. ಈ ಬಗ್ಗೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಹೇಳಿದರು.

3ನೇ ಹಂತದ ಬಂದರಿನ ವಿಸ್ತರಣೆಗೆ ಇನ್ನಷ್ಟು ಭೂಮಿ ಅಗತ್ಯ ಇರುವ ಬಗ್ಗೆ ಮೀನುಗಾರ ಮುಖಂಡರು ತಿಳಿಸಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಪಡಿತರ ವ್ಯವಸ್ಥೆಯಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಕೇಂದ್ರ ಸರಕಾರ ಕಡಿಮೆಗೊಳಿಸಿದ್ದು, ಈ ನಿಟ್ಟಿನಲ್ಲಿ ಮೀನುಗಾರಿಕಾ ದೋಣಿಗಳು ಸೀಮೆಎಣ್ಣೆಗೆ ಪರ್ಯಾಯವಾದ ಇಂಧನದತ್ತ ಗಮನಹರಿಸಬೇಕು ಎಂದು ಸಚಿವರು ನುಡಿದರು.

ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರಕಾರವು ಗಂಭೀರವಾಗಿ ಚಿಂತಿಸಲಿದೆ ಎಂದು ಸಚಿವ ನಾಡಗೌಡ ತಿಳಿಸಿದರು.

ಸಭೆಯಲ್ಲಿ ಮೀನುಗಾರಿಕಾ ಇಲಾಖಾ ನಿರ್ದೇಶಕ ವೀರಪ್ಪಗೌಡ, ಮೀನುಗಾರಿಕಾ ಉಪನಿರ್ದೇಶಕ ಮಹೇಶ್ ಕುಮಾರ್, ಮೀನುಗಾರ ಮುಖಂಡರು, ವಿವಿಧ ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸಚಿವರು ಮೀನುಗಾರಿಕಾ ಬಂದರಿನ ಎಲ್ಲಾ ಘಟಕಗಳಿಗೆ, ಜೆಟ್ಟಿ ಸ್ಥಾವರ, ಮಂಜುಗಡ್ಡೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments are closed.