ಕರಾವಳಿ

ಕುಂಭಾಸಿ ವಿನಾಯಕನಗರ ಕಾಲನಿ ನಿವಾಸಿಗಳಿಗೆ ಮಳೆಗಾಲದಲ್ಲೂ ಕಿಲುಬು ನೀರಿನ ದೌರ್ಭಾಗ್ಯ!

Pinterest LinkedIn Tumblr

ಕುಂದಾಪುರ: ಇಡೀ ಕರಾವಳಿಯೇ ಮಳೆಯಿಂದ ಹರ್ಷಗೊಂಡಿದೆ.. ಬಾವಿ, ನದಿ, ಹಳ್ಳಕೊಳ್ಳಗಳು ತುಂಬಿದೆ….ಕುಡಿಯೋ ನೀರಿನಿಂದ ಹಿಡಿದು ಬೇಸಾಯಕ್ಕೆ ಭರಪೂರ್ ನೀರು ಸಿಕ್ಕಿದೆ. ಆದ್ರೇ ಈ ಗ್ರಾಮದಲ್ಲಿ ಕಾಲನಿ ನಿವಾಸಿಗಳು ಮಾತ್ರ ನಿಜಕ್ಕೂ ದುರದ್ರಷ್ಟವಂತಾರಾಗಿದ್ದಾರೆ. ಎಲ್ಲೇಡೆ ನೀರು ಯಥೇಚ್ಚ ಸಿಕ್ಕಿದ್ರೂ ಕೂಡ ಈ ಕಾಲನಿ ಮಂದಿ ಇಂದಿಗೂ ಕುಡಿಯೋ ನೀರು ಕಿಲುಬು ಹಾಗೂ ಕಬ್ಬಿಣದ ತುಣುಕು ಮಿಶ್ರವಾಗಿದೆ. ಕುಂದಾಪುರದ ಕುಂಭಾಸಿ ವಿನಾಯಕ ನಗರ ಕಾಲನಿ ನಿವಾಸಿಗಳ ಗೋಳಿನ ಕಥೆಯಿದು.

ಕಲುಷಿತ ನೀರು…..
ಹೀಗೆ ಬಾಟಲಿಯಲ್ಲಿ ಇರೋ ಕೆಂಬಣ್ಣದ ನೀರು ಯಾವುದೇ ಚರಂಡಿಯ ನೀರಲ್ಲ. ಈ ನೀರು ನಿತ್ಯ ಜನರು ಕುಡಿಯುವ ನೀರು ಎಂದ್ರೆ ಒಂದು ಕ್ಷಣ ಯಾರಾದ್ರೂ ದಂಗಾಗ್ತಾರೆ. ಆದ್ರೇ ಈ ವಿಷ್ಯ ಸತ್ಯ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕುಂಭಾಸಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿನಾಯಕ ನಗರ ಜನತಾ ಕಾಲನಿಯ ವಾಸಿಗಳು ನಿತ್ಯ ಇದನ್ನೇ ಕುಡಿತಾರೆ, ಇದರಲ್ಲೇ ಅಡುಗೆ ಮಾಡ್ತಾರೆ, ಇದರಲ್ಲೇ ಸ್ನಾನ ಮಾಡ್ತಾರೆ. ಹೌದು…. ಇಂದು ನಂಬೋಕೆ ಆಗಲ್ಲ ಇದನ್ನ ನಂಬಲೇಬೇಕು. ಕಾಲನಿಯಲ್ಲಿರುವ ಕೊಳವೆ ಬಾವಿಯಲ್ಲಿ ನೀರು ಸೇದಿದರೆ ಬರೋದು ಅಂತಿಂತಹ ನೀರಲ್ಲ…ಕೆಂಬಣ್ಣದಲ್ಲಿರೋ ಕಲುಷಿತ ನೀರು. ಈ ನೀರಿನ ಜೊತೆಯಲ್ಲಿಯೇ ಕಬ್ಬಿಣದ ತುಣುಕುಗಳು, ಹುಳಹುಪ್ಪಟೆಗಳು ಬಿಂದಿಗೆಯಲ್ಲಿ ಇರುತ್ತೆ. ಇದೇ ನೀರನ್ನು ಎತ್ತಿ ಮನೆಗೆ ಕೊಂಡೊಯ್ದು ಪಾತ್ರೆಯಲ್ಲಿ ಒಂದೆರಡು ಬಾರಿ ಸೋಸಿ, ಬಿಸಿ ಮಾಡಿ ಕುಡಿಬೇಕು. ಹಾಗೆಯೇ ಕುಡಿದ್ರೆ ಆಸ್ಪತ್ರೆ ಖದ ತಟ್ಟೋದು ಗ್ಯಾರೆಂಟಿ. ಹೀಗೆ ಪ್ರತಿ ಬಾರಿ ಸೋಸುವಾಗ ಕೊಡವೊಂದರಲ್ಲಿ ನೂರು ಗ್ರಾಂನಷ್ಟು ಕಬ್ಬಿಣದ ತುಣುಕು, ಕೆಸರು ಸೇರಿದಂತೆ ಕಲುಷಿತ ವಸ್ತು ಸಿಗುತ್ತೆ. ಇನ್ನು ಸೋಸಿದ ಬಟ್ಟೆಯಲ್ಲೂ ನೀರು ಕೆಳಗಿಳಿಯದಷ್ಟು ಪಾಚಿಯಂತಹ ವಸ್ತುವಿದ್ದು ಬಿಳಿ ಬಟ್ಟೆ ಕೆಂಬಣ್ಣಕ್ಕೆ ತಿರುಗುತ್ತೆ.

ಅನಾರೋಗ್ಯಕ್ಕೆ ಆಹ್ವಾನ!
ಅಂದ ಹಾಗೆ ಇಲ್ಲಿನ ಕಾಲನಿಯ ಮೂರನೇ ಅಡ್ಡರಸ್ತೆಯಲ್ಲಿ ಸರಕಾರಿ ಬಾವಿ ಇದೆ. ಅದು ಕೂಡ ತೆರೆದ ಬಾವಿಯಾಗಿದ್ದು ಯತೇಚ್ಚ ನೀರಿದೆ. ಆದರೇ ಕಳಪೆ ಕಾಮಗಾರಿಯಿಂದಾಗಿ ಕಳೆದ ವರ್ಷ ಈ ಬಾವಿ ಕುಸಿದಿದ್ದು, ಇದನ್ನೂ ಕೂಡ ಸ್ಥಳಿಯಾಡಳಿತ ಇಂದಿಗೂ ರಿಪೇರಿ ಮಾಡಿಲ್ಲ. ಬಾವಿ ಕುಡಿಯುವ ನೀರು ಪೂರೈಕೆ ಬದಲು ಅಕ್ಕಪಕ್ಕದ ಮನೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಬಾಯ್ತೆರೆದು ನಿಂತಿದೆ. ಕುಂಭಾಸಿಯ ಈ ವಿನಾಯಕ ಜನತಾ ಕಾಲನಿಯಲ್ಲಿ ಸುಮಾರು ಐನೂರು ಮನೆಯಿದ್ದು, ಪರಿಸರದಲ್ಲಿ ಮೂರ್‍ನಾಲ್ಕು ಕೊಳವೆ ಬಾವಿಗಳಿದ್ದರೂ, ಕುಡಿಯೋದಕ್ಕೆ ಬಳಸೋದು ಒಂದೇ ಕೊಳವೆ ಬಾವಿ ನೀರು. ಕೊಳವೆ ಬಾವಿಯಿಂದ ಒಂದೆರಡು ಕೊಡ ನೀರು ಜಗ್ಗಿದ ನಂತರ ಬರೋದು ಬರೇ ಕಿಲಬು ನೀರು. ನೀರು ಕೂಡಾ ಕಬ್ಬಿಣದ ಕಿಲಬು ವಾಸನೆ ಬರುತ್ತದೆ. ನೀರು ಕುಡಿಯುವುದರಿಂದ ಹೊಟ್ಟೆ ನೋವು, ಮೈಕೈ ತುರಿಕೆ, ತಲೆ ಕೂದಲು ಉದುರುತ್ತಿದೆ. ಚರ್ಮದ ನವೆ ಕೂಡಾ ಕಾಣಿಸಿಕೊಳ್ಳುತ್ತಿದೆ. ಕೊಳವೆ ಬಾವಿ ನೀರು ಸ್ನಾನಕ್ಕೂ ಯೋಗ್ಯವಾಗಿಲ್ಲ. ನೀರೆತ್ತಿ ಒಂದು ದಿನ ಪಾತ್ರೆಯಲ್ಲಿ ಇಟ್ಟು ಮರುದಿನ ಬಳಸಬೇಕು. ನೀರು ಸೋಸಿ ಪಾತ್ರೆಯಲ್ಲಿ ಶೇಖರಿಸಿಟ್ಟರೂ ಪಾತ್ರೆ ತಳದಲ್ಲಿ ಇಂಚು ದಪ್ಪದಲ್ಲಿ ಕೆಸರು ಮಡ್ಡಿ ನಿಲ್ಲುತ್ತದೆ. ಅದರೊಟ್ಟಿಗೆ ಕೊಳೆವೆ ಬಾವಿ ಕಬ್ಬಿಣದ ಪೈಪ್ ಪುಡಿ, ಶಿಲೆಕಲ್ಲಿನ ಧೂಳು ಶೇಖರಣೆ ಆಗುತ್ತದೆ. ಇದೇ ನೀರು ಕಳೆದ ಮೂರ್‍ನಾಲ್ಕು ತಿಂಗಳಿಂದ ಜನ ಬಳಸುತ್ತಿದ್ದಾರೆ. ಕುಂಭಾಶಿ ಗ್ರಾಮ ಪಂಚಾಯಿತಿಗೂ ದೂರು ನೀಡಿದ್ದರೂ, ಕಿಲಬು ನೀರು ಕುಡಿಯುವುದರಿಂದ ಮುಕ್ತಿ ಸಿಕ್ಕಿಲ್ಲ. ಕುಂಭಾಶಿ ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಅದಾದರೂ ಶುದ್ದವಾಗಿದೆಯಾ ಅಂದರೆ ಅದೂ ಇಲ್ಲ. ಗ್ರಾಪಂ ನೀರು ಕೂಡಾ ಕಿಲುಬೆದ್ದು ಪಾತ್ರೆ ತಳದಲ್ಲಿ ಕೆಸರು ನಿಲ್ಲುತ್ತದೆ. ಗ್ರಾಪಂ ಪೂರೈಕೆ ಮಾಡುವ ನೀರು ನಿತ್ಯ ಬರೋದೆ ಇಲ್ಲ.

ಶುದ್ಧ ನೀರಿನ ಘಟಕದ ಬಗ್ಗೆ ಗೊತ್ತೇಯಿಲ್ಲ!
ವಿನಾಯಕ ಕಾಲನಿ ಪ್ರವೇಶದಲ್ಲೇ ಶುದ್ದ ನೀರಿನ ಘಟಕ ಇದ್ದರೂ ನಾಗರಿಕರಿಗೆ ಮಾತ್ರ ಕಿಲುಬು ನೀರು ಇಂದಿಗೂ ಗತಿಯಾಗಿದೆ! ಕಾಲನಿ ವಾಸಿಗಳಿಗೆ ಶುದ್ಧ ನೀರು ಪೂರೈಕೆ ನಿಟ್ಟಿನಲ್ಲಿ ಆರಂಭಿಸಿದ ಶುದ್ಧೀಕರಣ ಘಟಕದ ರಸ್ತೆ ಸಮೀಪದ ಬಾಗಿಲಿಗೆ ಬೀಗ ಜಡಿಯಲಾಗಿದೆ. ನೀರು ಸಿಗುವ ಬಾಗಿಲು ಇನ್ನೊಂದು ಕಡೆಯಲ್ಲಿದ್ದು ಇಲ್ಲಿ ನೀರು ಸಿಗುತ್ತಿರುವ ಬಗ್ಗೆ ಕಾಲನಿಯ ಜನರಿಗೆ ಇನ್ನೂ ಮಾಹಿತಿಯೇ ಇಲ್ಲ. ಸರ್ಕಾರದ ಅನುದಾನ ಬಳಸಿ ನಿರ್ಮಿಸಿದ ಕಾಲನಿಯಲ್ಲಿರುವ ತೆರೆದ ಬಾವಿ ಕೂಡಾ ಕುಸಿದಿದ್ದರಿಂದ ಕೊಳವೆ ಬಾವಿಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ತೆರೆದ ಬಾವಿಯಲ್ಲಿ ಸಾಕಷ್ಟು ನೀರಿದ್ದು, ಶುದ್ಧವಾಗಿದೆ. ಗ್ರಾಮ ಪಂಚಾಯಿತಿ ಬಾವಿ ಆವರಣ ನಿರ್ಮಿಸಿ, ರಿಂಗ್ ಇಳಿಸಿದರೆ ಬಾವಿ ಭದ್ರವಾಗುವ ಜತೆ ಅಕ್ಕಪಕ್ಕದ ಮನೆಗಳಿಗೂ ಭದ್ರತೆ ಸಿಗುತ್ತದೆ. ಇನ್ನು ಕಾಲನಿ ರಸ್ತೆಯಂತೂ ಅವ್ಯವಸ್ಥೆ ಆಗರ. ಬೀದಿ ದೀಪ ಕೂಡಾ ಕಾಲನಿಯಲ್ಲಿ ಉರಿಯೋದಿಲ್ಲ. ಜನ ಕೂಡಾ ಬೀದಿ ದೀಪ, ಕುಡಿಯುವ ನೀರು, ರಸ್ತೆಗಳ ನಿರ್ಮಾಣದ ಬಗ್ಗೆ ಗ್ರಾಪಂ ಗಮನ ಸೆಳೆದಿದ್ದರೂ, ಬೆಲೆ ಸಿಗದ ನಿಮಿತ್ತ ವಿನಾಯಕ ಜನತಾ ಕಾಲನಿ ನಿವಾಸಿಗಳು ಕುಂಭಾಶಿ ಗ್ರಾಪಂ ಎದುರು ಧರಣಿ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.

ಮಳೆಗಾದಲ್ಲೂ ವಿನಾಯಕ ಕಾಲನಿ ವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ಆಡಳಿತ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಿಯಾಡಳಿತ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ.

(ಚಿತ್ರ, ವರದಿ-ಯೋಗೀಶ್ ಕುಂಭಾಸಿ)

Comments are closed.