ಕರಾವಳಿ

ಬಜ್ಪೆ ಸಮೀಪ ಕೆಂಪುಕಲ್ಲಿನ ಕೋರೆಗೆ ಬಿದ್ದು ಬಾಲಕ ಮೃತ್ಯು

Pinterest LinkedIn Tumblr

ಮಂಗಳೂರು, ಜುಲೈ.16: ಬಜಪೆ -ಮಳವೂರು ಗ್ರಾಪಂ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ಸಮೀಪದ ಗುಂಡಾಪು ಪದವು ಬಳಿಯ ಜರಿ ಎಂಬಲ್ಲಿ ಕೆಂಪುಕಲ್ಲಿನ ಕೋರೆಗೆ ಕಾಲುಜಾರಿ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ.

ಮೂಲತಃ ಬಾಗಲಕೋಟೆ ನಿವಾಸಿ, ಪ್ರಸ್ತುತ ಬಜ್ಪೆಯ ಪ್ರಾಥಮಿಕ ಮಹಿಳಾ ಆರೋಗ್ಯ ಕೇಂದ್ರದ ಸಹಾಯಕಿ ಸಾವಿತ್ರಿ ಹಾಗೂ ಎಲ್ಲಪ್ಪ ದಂಪತಿಯ ಪುತ್ರ ಸಂಜಯ್ ಕುಮಾರ್(16) ಎಂಬಾತ ಗೆಳೆಯರೊಂದಿಗೆ ಕೆಂಪುಕಲ್ಲಿನ ಕೋರೆಗೆ ಸ್ನಾನಕ್ಕೆ ಹೋಗಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಲ್ಲಿ ಮುಳುಗಿ ಮೃತ ಹೊಂದಿರುತ್ತಾನೆ.

ಬಜ್ಪೆ ಕಿನ್ನಿಪದವಿನಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಸಂಜಯ್ ರವಿವಾರ ಬೆಳಗ್ಗೆ ಸ್ನೇಹಿತನ ಮನೆಗೆ ಹೋಗಿ ಬರುವೆ ಎಂದು ಮನೆಯಲ್ಲಿ ತಿಳಿಸಿದ ಹೊರಟಿದ್ದ. ಬಳಿಕ ಈತ ಸ್ನೇಹಿತ ಹೊಸದುರ್ಗದ ರಂಜಿತ್ ಎಂಬಾತನೊಂದಿಗೆ ಗುಂಡಾಪುಪದವಿಗೆ ತೆರಳಿದ್ದಾನೆ. ಈಜು ಬಾರದ ಇಬ್ಬರು ಅಲ್ಲಿ ನೀರು ತುಂಬಿದ್ದ ಕೆಂಪು ಕಲ್ಲಿನ ಕೋರೆಗೆ ಸ್ನಾನಕ್ಕೆ ಇಳಿದಿದ್ದಾರೆ.

ಈ ವೇಳೆ ಸಂಜಯ್ ಕಾಲುಜಾರಿ ನೀರಲ್ಲಿ ಮುಳುಗಿದನೆನ್ನಲಾಗಿದೆ. ಕೂಡಲೇ ರಂಜಿತ್ ಬೊಬ್ಬೆ ಹಾಕಿದಾಗ ಸ್ಥಳೀಯರು ಧಾವಿಸಿ ಸಂಜಯ್‌ನನ್ನು ಮೇಲೆತ್ತಿದ್ದಾರೆ. ಬಳಿಕ ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ದಾರಿಮಧ್ಯೆ ಆತ ಕೊನೆಯುಸಿರೆಳೆದ ಎಂದು ತಿಳಿದುಬಂದಿದೆ.

ಈ ಸಂಬಂಧ ಕಲ್ಲಿನ ಕೋರೆಗೆ ತಡೆಗೋಡೆ ಸಹಿತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕೋರೆಯ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಬಜ್ಪೆ ಪೊಲೀಸರು ತಿಳಿಸಿದ್ದಾರೆ.

Comments are closed.