ಕ್ರೀಡೆ

ಫೀಫಾ ವಿಶ್ವಕಪ್’ನಲ್ಲಿ ಸೋತ ಕ್ರೊವೇಷಿಯಾ ತಂಡಕ್ಕೆ ಕ್ರೀಡಾ ಸ್ಪೂರ್ತಿ ತುಂಬಿದ ಕ್ರೊವೇಷಿಯಾ ಅಧ್ಯಕ್ಷೆ ಬಗ್ಗೆ ಶ್ಲಾಘನೆ

Pinterest LinkedIn Tumblr

ಮಾಸ್ಕೋ: ಬಹು ನಿರೀಕ್ಷಿತ ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರಬಲ ಫ್ರಾನ್ಸ್ ವಿರುದ್ಧ ಕ್ರೊವೇಷಿಯಾ ತಂಡ ಸೋಲುವ ಮೂಲಕ ಟ್ರೋಫಿ ಗೆಲ್ಲುವ ಆಸೆಯನ್ನು ಕಳೆದುಕೊಂಡಿದೆ. ಆದರೆ ವಿಶ್ವಕಪ್ ಟ್ರೋಫಿ ಕಳೆದುಕೊಂಡರೂ ಕ್ರೊವೇಷಿಯಾದ ಅಧ್ಯಕ್ಷೆ ಮಾತ್ರ ತಮ್ಮ ಕ್ರೀಡಾಸ್ಪೂರ್ತಿಯಿಂದ ಇದೀಗ ಜಗತ್ತಿನಾಧ್ಯಂತ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಹೌದು.. ನಿನ್ನೆ ರಷ್ಯಾದಲ್ಲಿ ಅಂತ್ಯವಾದ ಫೀಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ತಂಡ 4-2 ಅಂತರದಲ್ಲಿ ಹೀನಾಯವಾಗಿ ಸೋಲುಕಂಡಿತು. ಲೀಗ್ ಹಂತದ ಪಂದ್ಯಗಳಿಂದ ಅಜೇಯರಾಗಿ ಫೈನಲ್ ವರೆಗೂ ಬಂದಿದ್ದ ಕ್ರೊವೇಷಿಯಾ ತಂಡ ಫೈನಲ್ ನಲ್ಲಿ ಸೋಲು ಕಾಣುವ ಮೂಲಕ ಟ್ರೋಫಿಗೆಲ್ಲುವ ತನ್ನ ಮಹದಾಸೆಯನ್ನು ಕೈ ಬಿಟ್ಟಿತ್ತು. ಫೈನಲ್ ನಲ್ಲಿ ಸೋಲು ಕಾಣುತ್ತಿದ್ದಂತೆಯೇ ತಂಡದ ನಾಯಕ ಲೂಕಾ ಮೋಡ್ರಿಕ್ ಸೇರಿದಂತೆ ತಂಡದ ಆಟಗಾರರು ಮೈದಾನದಲ್ಲೇ ಭಾವುಕರಾಗಿ ಕಣ್ಣೀರು ಸುರಿಸಿದರು.

ಆದರೆ ಈ ಹಂತದಲ್ಲಿ ಆಟಗಾರರಿಗೆ ಆತ್ಮಸ್ಥೈರ್ಯ ತುಂಬಿದ್ದು ಆ ದೇಶದ ಅಧ್ಯಕ್ಷೆ ಕೊಲಿಂಡಾ ಗ್ರಾಬರ್-ಕಿಟಾರ್ವಿಕ್. ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಅವರು ಕ್ರೊವೇಷಿಯಾದ ಅಧ್ಯಕ್ಷರಾಗಿದ್ದು, ತಮ್ಮ ತಂಡ ಪೈನಲ್ ನಲ್ಲಿ ಆಡುವುದನ್ನು ನೋಡಲೆಂದೇ ರಷ್ಯಾಗೆ ಆಗಮಿಸಿದ್ದರು. ತಮ್ಮ ಅತ್ಯಂತ ಕಠಿಣ ವೇಳಾಪಟ್ಟಿಯ ನಡುವೆಯೂ ತಮ್ಮ ತಂಡದ ಆಟಗಾರರಿಗೆ ಸ್ಪೂರ್ತಿ ನೀಡಲು ಮತ್ತು ಬೆಂಬಲ ನೀಡಲು ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಅವರು ರಷ್ಯಾಗೆ ಆಗಮಿಸಿದ್ದರು.

ಇದಕ್ಕೂ ಮೊದಲು ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ನ್ಯಾಟೋ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಶೃಂಗಸಭೆ ಅಂತ್ಯವಾಗುತ್ತಿದ್ದಂತೆಯೇ ಅಲ್ಲಿಂದ ತವರಿಗೂ ತೆರಳದೇ ನೇರವಾಗಿ ಮಾಸ್ಕೋಗೆ ಆಗಮಿಸಿದ ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಫೈನಲ್ ಪಂದ್ಯದ ವೇಳೆ ತಮ್ಮ ತಂಡದ ಬೆಂಬಲಕ್ಕೆ ನಿಂತು ಶುಭ ಹಾರೈಸಿದರು. ಆದರೆ ದುರಾದೃಷ್ಟವಶಾತ್ ಅವರ ತಂಡ ಸೋಲು ಕಂಡಿತು. ಈ ವೇಳೆ ಭಾವುಕರಾಗಿ ಮೈದಾನದಿಂದ ಹೆಜ್ಜೆ ಹಾಕಿದ ಕ್ರೊವೇಷಿಯಾ ಆಟಗಾರರನ್ನು ಖುದ್ದು ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಅವರು ಸಂತೈಸಿದ್ದು, ಮಾತ್ರವಲ್ಲದೇ ಅವರಗೆ ಆತ್ಮ ಸ್ಥೈರ್ಯ ತುಂಬಿದರು.

ಕ್ರೊವೇಷಿಯಾ ಅದ್ಯಕ್ಷೆ ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಅವರ ಈ ಕಾರ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಜಗತ್ತಿನಾಧ್ಯಂತ ಫುಟ್ಬಾಲ್ ಪ್ರೇಮಿಗಳು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಈ ಹಿಂದೆ ಇದೇ ಕ್ರೊವೇಷಿಯಾ ಅಧ್ಯಕ್ಷೆ ಕೊಲಿಂಡಾ ಅವರು ತಮ್ಮ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಿ ಪೈನಲ್ ಗೇರಿದ್ದಾಗ ಆಟಗಾರರೊಂದಿಗೆ ಸೇರಿ ಸುದ್ದಿಗೋಷ್ಠಿಯಲ್ಲೇ ಕುಣಿದು ಕುಪ್ಪಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

Comments are closed.