ಕರಾವಳಿ

ಅನಧಿಕೃತ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್‍ಸ್, ಬಂಟಿಂಗ್ಸ್‌ಗಳ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಸೂಚನೆ

Pinterest LinkedIn Tumblr

ಮಂಗಳೂರು : ನಗರದಲ್ಲಿ ಪಾಲಿಕೆಯ ಅನುಮತಿ ಇಲ್ಲದೆ ಎಲ್ಲೆಡೆಗಳಲ್ಲಿ ಹಾಕುತ್ತಿರುವ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ, ನಗರ ಯೋಜನೆ ಮತ್ತು ಲೆಕ್ಕಪತ್ರ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಅವರು, ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಹೋರ್ಡಿಂಗ್ಸ್, ಹೋರ್ಡಿಂಗ್ಸ್ ಏಜೆನ್ಸಿಯವರಿಂದ ಬಾಕಿ ಇರುವ ಶುಲ್ಕ, ವಸೂಲಿ ಮಾಡಲು ತೆಗೆದುಕೊಂಡಿರುವ ಕ್ರಮಗಳ ಮಾಹಿತಿಯನ್ನು ಶೀಘ್ರದಲ್ಲಿ ತಮಗೆ ನೀಡ ಬೇಕೆಂದು ಸೂಚಿಸಿದರು.

ಮನೆ ತೆರಿಗೆ ವಸೂಲಿಯಾಗದೇ ಇರುವ ಬಗ್ಗೆ, ತಾತ್ಕಾಲಿಕ ಕಟ್ಟಡ ಸಂಖ್ಯೆ ಪಡೆದುಕೊಂಡವರು ದುಪ್ಪಟ್ಟು ತೆರಿಗೆ ಕಟ್ಟದೇ ಕೇವಲ ಒಂದು ಬಾರಿ ಮಾತ್ರ ದುಪ್ಪಟ್ಟು ತೆರಿಗೆ ಪಾವತಿಸಿ ನಂತರ ಸಾಮಾನ್ಯ ತೆರಿಗೆ ಪಾವತಿಸಿರುವುದರ ಬಗ್ಗೆ ಅಧಿಕಾರಿಗಳು ಮೌನವಾಗಿರುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಪಾಲಿಕೆಗೆ ಬರುತ್ತಿರುವ ಆದಾಯ ಸೋರಿಕೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಆದರೆ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಆದೇಶಿಸಿದರು.

ಪಾರ್ಕಿಂಗ್ ಸ್ಥಳಗಳಲ್ಲಿ ಡೋರ್ ನಂಬರ್ ನೀಡಿ ಅನಧಿಕೃತ ಕಟ್ಟಡಗಳಲ್ಲಿ ವ್ಯವಹಾರ ನಡೆಸಲು ಅನುಮತಿ ನೀಡುವುದು ನಿಲ್ಲಿಸಬೇಕು. ತಕ್ಷಣ ಅನಧಿಕೃತ ಡೋರ್ ನಂಬರ್ ಗಳನ್ನು ರದ್ದುಗೊಳಿಸಬೇಕು ಎಂದು ಸೂಚಿಸಿದರು. ನಗರ ಯೋಜನಾಧಿಕಾರಿಗಳು ಕಟ್ಟಡ ನಿರ್ಮಾಣ ಪರವಾನಿಗೆ ನೀಡಲು ತೆಗೆದುಕೊಂಡಿರುವ ಮಾನದಂಡಗಳನ್ನು ಪ್ರಶ್ನಿಸಿದ ಶಾಸಕರು, ಪರವಾನಿಗೆ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಯಾಕೆ ಎಂದು ಕೇಳಿದರು.

ಸ್ವಂತಕ್ಕೆ ಚಿಕ್ಕ ಮನೆ ನಿರ್ಮಾಣ ಮಾಡುವವರಿಗೆ ಪರವಾನಿಗೆ ನೀಡಲು ಸತಾಯಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಸ್ವಂತಕ್ಕೆ ಮನೆ ಕಟ್ಟುವವರು ಬ್ಯಾಂಕ್ ಸಾಲಪಡೆದು ಬೇಗ ಸ್ವಂತ ಮನೆಯಾಗುತ್ತದೆ ಎಂದು ಸಂತೋಷದಿಂದ ಪಾಲಿಕೆಗೆ ಪರವಾನಿಗೆಗೆ ಬಂದರೆ ಸತಾಯಿಸುತ್ತಿರುವ ಮತ್ತು ಕಟ್ಟಡ ಪ್ರವೇಶ ಪತ್ರಕ್ಕೂ ಅಲೆದಾಡಿಸುತ್ತಿರುವ ದೂರುಗಳು ಜನಸಾಮಾನ್ಯರಿಂದ ಬಂದಿವೆ. ಜನರಿಗೆ ತೊಂದರೆಯಾಗುವುದನ್ನು ತಾವು ಸಹಿಸಲ್ಲ ಎಂದು ಹೇಳಿದರು.

ಪಾಲಿಕೆ ಅಯುಕ್ತ ಮೊಹಮ್ಮದ್ ನಝೀರ್, ಮನಪಾ ವಿಪಕ್ಷ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯರಾದ ವಿಜಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ನಗರ ಯೋಜನೆ, ಕಂದಾಯ, ಲೆಕ್ಕಪತ್ರ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Comments are closed.