ಕರಾವಳಿ

ವಾಹನ ಸವಾರರೇ ಜಾಗ್ರತೆ: ಘಾಟಿಯ ಮಾರ್ಗ ಕುಸಿತ; ಅಪಾಯದಲ್ಲಿದೆ ಆಗುಂಬೆ ಘಾಟಿ!

Pinterest LinkedIn Tumblr

ಉಡುಪಿ/ತೀರ್ಥಹಳ್ಳಿ: ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಪ್ರದೇಶವೂ ಕೂಡ ಭೀತಿಯಲ್ಲಿದೆ. ಉಡುಪಿ-ಶಿವಮೊಗ್ಗ, ಕುಂದಾಪುರ-ಶಿವಮೊಗ್ಗ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟಿ ಮಾರ್ಗದ ರಸ್ತೆಯಲ್ಲಿ ಗುರುವಾರ ಧರೆ ಕುಸಿದಿದ್ದು ವಾಹನ ಸಂಚಾರ ಸ್ಥಗಿತ ಭೀತಿ ಎದುರಾಗಿದೆ. ಚಾರ್ಮಾಡಿ ಘಾಟಿ ಕುಸಿತವಾಗಿ ಅನಾಹುತ ಸಂಭವಿಸಿದ ಬೆನ್ನಲ್ಲೇ ಆಗುಂಬೆ ಘಾಟಿ ಕುಸಿತ ಪ್ರಯಾಣಿಕರಲ್ಲಿ ಭಯವುಂಟು ಮಾಡಿದೆ.

ಬುಧವಾರದಿಂದ ಗುರುವಾರ ಬೆಳಗ್ಗೆವರೆಗೆ ಆಗುಂಬೆಯಲ್ಲಿ 305.02 ಮಳೆ ಸುರಿದೆ. ಶಿವಮೊಗ್ಗ- ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ಆಗುಂಬೆ ಘಾಟಿ ರಸ್ತೆಯ 7ನೇ ತಿರುವಿನಲ್ಲಿ ಧರೆ ಕುಸಿದಿದೆ. ಬಸ್‌, ಇತರೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ಮಳೆ ಮತ್ತಷ್ಟು ಹೆಚ್ಚಾಗಿ ಧರೆ ಕುಸಿತ ಮುಂದುವರಿದರೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಆಗುಂಬೆ ಘಾಟಿ ಮಾರ್ಗ ಮಧ್ಯೆ ಕೆಲವೆಡೆ, ಹಲವು ತಿರುವು ಬಳಿ ತಡೆಗೋಡೆ ಸುಭದ್ರವಾಗಿಲ್ಲ. ಘನ ವಾಹನಗಳು ತಗುಲಿ ಕೆಲ ಸ್ಥಳದಲ್ಲಿ ತಡೆಗೋಡೆ ಒಡೆದು ಬಿರುಕು ಬಿಟ್ಟಿದೆ. ಸಂಬಂಧಪಟ್ಟ ಇಲಾಖೆ ಘಾಟಿ ಮಾರ್ಗ ದುರಸ್ತಿ ನಿರ್ವಹಣೆ ಸರಿಯಾಗಿ ಮಾಡ್ತಿಲ್ಲ.

ಆಗುಂಬೆಯ ಕಡಿದಾದ ಅಪಾಯಕಾರಿ ಘಾಟಿ ಮಾರ್ಗದ ನಿರ್ವಹಣೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಆಸಕ್ತಿ ತೋರದೆ ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರು ಸಂಕಟಪಡುವಂತಾಗಿದೆ. ಸದ್ಯ ಚೆಕ್ ಪೋಸ್ಟ್ ಹಾಕುವ ಮೂಲಕ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಸಲಹೆ ಸೂಚನೆ ನೀಡುವ ಕಾರ್ಯವೂ ಆಗುತ್ತಿದೆ.

ಎಚ್ಚರ…ಎಚ್ಚರ..!
7ನೇ ತಿರುವಿನ ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಬೇಕಾಗಿದೆ. ಲಾರಿ, ಟ್ರಕ್ ಸೇರಿದಂತೆ ಘನ ವಾಹನಗಳು ತೆರಳದಂತೆ ಉಡುಪಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮಳೆಯಿಂದಾಗಿ ಬಸ್ಸು, ಕಾರುಗಳು ನಿಧಾನವಾಗಿ ಸಂಚರಿಸುವುದು ಉತ್ತಮ. ಮಳೆ ಜಾಸ್ಥಿಯಾದರೇ ಆಗುಂಬೆ ಘಾಟಿಯಲ್ಲಿ ಮರಗಳು ಅಥವಾ ಗುಡ್ಡ ಕುಸಿಯುವ ಸಾಧ್ಯತೆ ದಟ್ಟವಾಗಿದೆ.

Comments are closed.