ಕರಾವಳಿ

ಬಂಟ್ವಾಳದಲ್ಲಿ ಸೆಲೂನ್‌ಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ : ಬಜರಂಗದಳದ ಭುವಿತ್ ಶೆಟ್ಟಿ ಸಹಿತ ಐವರ ಸೆರೆ

Pinterest LinkedIn Tumblr

ಬಂಟ್ವಾಳ, ಜೂನ್. 28: ಬಂಟ್ವಾಳ ಬೈಪಾಸ್‌ನ ನಾಲ್ಕುಮಾರ್ಗ ಎಂಬಲ್ಲಿ ಯುವಕನೋರ್ವನಿಗೆ ತಂಡದಿಂದ ಹಲ್ಲೆ, ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಟ್ವಾಳದ ನಿವಾಸಿಗಳಾದ, ಪ್ರಕರಣ ಪ್ರಮುಖ ಆರೋಪಿ ಬಜರಂಗದಳದ ಸದಸ್ಯ ಎನ್ನಲಾದ ಭುವಿತ್ ಶೆಟ್ಟಿ ಯಾನೆ ಭುವಿತ್ (27), ವಸಂತ ಕುಮಾರ್ (32), ಕಮಲಾಕ್ಷ (21), ಜಿತೇಂದ್ರ ಯಾನೆ ಜೀತು (32), ಅಭಿಜಿತ್ ಯಾನೆ ಅಭಿ (22) ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಐವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್.10ರಂದು ರಾತ್ರಿ 9:15ಕ್ಕೆ ಬಂಟ್ವಾಳ ಬೈಪಾಸ್‌ನ ನಾಲ್ಕು ಮಾರ್ಗ ಎಂಬಲ್ಲಿ ಬೈಕ್‌ಗಳಲ್ಲಿ ಬಂದ ತಂಡವೊಂದು ಸೆಲೂನ್‌ಗೆ ನುಗ್ಗಿ, ಅಲ್ಲಿ ಕೆಲಸ ಮಾಡುತ್ತಿದ್ದ ದೀಕ್ಷಿತ್ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿತ್ತು. ತದನಂತರ ದೀಕ್ಷಿತ್ ಬಳಿಯಿದ್ದ ಮೊಬೈಲ್ ಹಾಗೂ 10 ಸಾವಿರ ರೂ. ದೋಚಿ, ಅಂಗಡಿಯನ್ನು ಹಾನಿಗೊಳಿಸಿ ಪರಾರಿಯಾಗಿತ್ತು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ದೀಕ್ಷಿತ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಈ ಸಂಬಂಧ ಭುವಿತ್ ಮತ್ತು ಅತನ ಸಹಚರರ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಕುರಿತು ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಹಾಗೂ ಉಪ್ಪಿನಂಗಡಿ ಪೊಲೀಸರು ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿ ಈ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರ ಮಾರ್ಗದರ್ಶನದಲ್ಲಿ ಅಡೀಸನಲ್ ಎಸ್ಪಿ, ಡಿವೈಎಸ್ಪಿ, ಸಿಪಿಐ ಅವರ ನಿರ್ದೇಶನದ ಮೇರೆಗೆ ನಡೆಸಿದ  ಕಾರ್ಯಾಚರಣೆಯಲ್ಲಿ ಬಂಟ್ವಾಳ ಎಸ್ಸೈ ಚಂದ್ರಶೇಖರ, ಹರೀಶ, ಯಲ್ಲಪ್ಪ, ಉಪ್ಪಿನಂಗಡಿ ಎಸ್ಸೈ ನಂದಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿಗಳಾದ ಎಚ್.ಸಿ. ಸುರೇಶ, ಮುರುಗೇಶ, ಉದಯಕುಮಾರ, ಪಿಸಿಗಳಾದ ಜಗದೀಶ, ಉಮೇಶ, ಮಲಿಕ್ ಸಾಬ್, ಝಮೀರ್, ಅವಿನಾಶ್,ಕೇದರ್, ಪ್ರಶಾಂತ್, ಮೋಹನ್, ಬಸವರಾಜ, ಪರಮೇಶ್, ಸಂಪತ್ ಪಾಲ್ಗೊಂಡಿದ್ದರು.

Comments are closed.