ಕರಾವಳಿ

ನಾಲ್ಕು ವರ್ಷ ಕಳೆದರೂ ನ್ಯಾಯಾಲಯದ ರಸ್ತೆ ಕಾಮಗಾರಿ ಅಪೂರ್ಣ : ಕಳಪೆ ಕಾಮಗಾರಿ ಖಂಡಿಸಿ ವಕೀಲರಿಂದ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ಮುನ್ನೂರು ಮೀಟರ್ ಉದ್ದದ ರಸ್ತೆಯ ಕೆಲಸ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಕೆಲಸ ಸಂಪೂರ್ಣವಾಗಿಲ್ಲವೆಂದು ವಕೀಲರಾದಿಯಾಗಿ ನ್ಯಾಯಾಲಯಕ್ಕೆ ಸಂಬಂಧಪಟ್ಟ ಅನೇಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.

ಕೇವಲ ಮುನ್ನೂರು ಮೀಟರ್ ಉದ್ದದ ರಸ್ತೆಗೆ ಹನ್ನೆರಡು ಕೋಟಿ ರೂಪಾಯಿ ಮಂಜೂರಾಗಿರುವುದು ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು. ಇಷ್ಟು ದೊಡ್ಡ ಮೊತ್ತದ ಹಣ ಮಂಜೂರಾಗಿದ್ದರೂ ಕಾಮಗಾರಿ ಮಾತ್ರ ಪೂರ್ಣ ಕಳಪೆ ಎಂದು ಪ್ರತಿಭಟನೆ ವೇಳೆ ವಕೀಲರು ಘೋಷಣೆ ಕೂಗಿದರು.

ಕಾಮಗಾರಿ ಕಳಪೆಯಾದ ಕಾರಣ ಈ ಮಳೆಗಾಲದಲ್ಲಿ ಗುಡ್ಡ ಜರಿದು ರಸ್ತೆ ಪೂರ್ತಿ ಹಾಳಾಗುವ ಪರಿಸ್ಥಿತಿಯನ್ನು ಅಲ್ಲಗಳೆಯುವಂತಿಲ್ಲ; ಅಕ್ಕಪಕ್ಕದ ಜಾಗದ ಮಾಲೀಕರು ರಸ್ತೆಗೆಂದೇ ಇದ್ದ ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಸಮಾನ ಮನಸ್ಕ ವಕೀಲರು ಪ್ರತಿಭಟನೆಯ ವೇಳೆ ತಮ್ಮ ನೋವನ್ನು ಹಂಚಿಕೊಂಡರು.

ಆದಷ್ಟು ಶೀಘ್ರದಲ್ಲಿ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆಯನ್ನು ಕೂಡ ನೀಡಿದರು. ಪ್ರತಿಭಟನೆಯಲ್ಲಿ ಶಂಭು ಶರ್ಮ, ರವೀಂದ್ರನಾಥ ಪಿಎಸ್, ಜಗದೀಶ ಶೇಣವ, ಸುಜಯ್ ಶೆಟ್ಟಿ, ಕಿಶೋರ್, ರಾಮಕೃಷ್ಣ ರೈ, ಪುಷ್ಪಲತಾ ಯುಕೆ, ಸುಮನಾ ಶರಣ್, ಸಂತೋಷ್ ನಾಯಕ್, ಎ ಎಲ್ ಶೆಣೈ ಉಪಸ್ಥಿತರಿದ್ದರು.

Comments are closed.