ಕರಾವಳಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಂದ ಮಂಗಳೂರಿನಲ್ಲಿ ಪಕ್ಷದ (“ಪ್ರಗತಿಯ ಪಕ್ಷ ಕರ್ನಾಟಕ”) ಪ್ರಣಾಳಿಕೆ ಬಿಡುಗಡೆ

Pinterest LinkedIn Tumblr

ಮಂಗಳೂರು, ಎಪ್ರಿಲ್ 27: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.

ಇಂದು ಬೆಳಿಗ್ಗೆ ನಗರದ ಟಿಎಂಎ ಪೈ ಕನ್ವೆನ್‌ಶನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ “ಪ್ರಗತಿಯ ಪಕ್ಷ ಕರ್ನಾಟಕ” ಹೆಸರಿನ ಕರ್ನಾಟಕ ಪ್ರಣಾಳಿಕೆ-2018-2023 ಅನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಡುಗಡೆಗೊಳಿಸಿ, ಪ್ರಣಾಳಿಕೆಯ ಮೊದಲ ಪ್ರತಿಯನ್ನು ಹಿರಿಯ ಮುಖಂಡ ಜನಾರ್ದನ ಪೂಜಾರಿಯವರಿಗೆ ಹಸ್ತಾಂತರಿಸಿದರು.

ಈ ಪ್ರಣಾಳಿಕೆಯನ್ನು ಜನರ ಬಳಿ ತೆರಳಿ ಅವರ ಭಾವನೆ, ಆಶಯವನ್ನು ಸಂಗ್ರಹಿಸಿ ಸಿದ್ಧಪಡಿಸಲಾಗಿದ್ದು,ಇದು ಕರ್ನಾಟಕದ ಜನತೆಯ ಮಾತಾಗಿದೆ ಎಂದು ಈ ವೇಳೆ ರಾಹುಲ್ ಗಾಂಧಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಪಕ್ಷದ ಜಿಲ್ಲಾ ಉಸ್ತುವಾರಿ ವಿಷ್ಣುನಾಥನ್, ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವೇದಿಕೆಯಲ್ಲಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವಾ, ಜೆ.ಆರ್.ಲೋಬೋ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಸರಕಾರದ ವಿಷನ್ 2025 : ಆವಲೋಕನ

ಕಳೆದ ನಾಲ್ಕು ತಿಂಗಳಿನಿಂದ 15 ಸದಸ್ಯರನ್ನೊಳಗೊಂಡ ಪ್ರಣಾಳಿಕೆ ಸಮಿತಿಯ ಸದಸ್ಯರು ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚಿಸಿ ಸಮಗ್ರವಾಗಿ ಚರ್ಚಿಸಿ ಸಿದ್ಧಪಡಿಸಿರುವ ಈ ಪ್ರಣಾಳಿಕೆಯಲ್ಲಿ ಕರ್ನಾಟಕವನ್ನು ಆರು ವಿಭಾಗವನ್ನಾಗಿಸಿಕೊಂಡು ಅಲ್ಲಿನ ಮೂಲ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಕಲ್ಪಿಸಲು ಆದ್ಯತೆ ನೀಡಲಾಗಿದೆ. ರಾಜ್ಯ ಸರಕಾರದ ವಿಷನ್ 2025, ಜಿಲ್ಲಾವಾರು ನೋಟ ಹಾಗೂ ಕ್ಷೇತ್ರವಾರು ಫಲಾನುಭವಿಗಳ ಸ್ಪಂದನದ ಮಾತುಗಳನ್ನೊಳಗೊಂಡ ಪ್ರತಿಬಿಂಬ ಇತ್ಯಾದಿಯನ್ನೂ ಕೂಡ ಪ್ರಣಾಳಿಕೆಯಲ್ಲಿ ಅವಲೋಕಿಸಲಾಗಿದೆ.

Comments are closed.