ಕರಾವಳಿ

ಡೈರಿ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾ ಅಡಗಿರುವ ಸಾಧ್ಯತೆ ಹೆಚ್ಚು….! ಯಾಕೆ ?

Pinterest LinkedIn Tumblr

ನೀವು ಚೀಸ್ ಅಥವಾ ಗಿಣ್ಣಿನಂತಹ ಡೈರಿ ಉತ್ಪನ್ನಗಳನ್ನು ಬಹುವಾಗಿ ಇಷ್ಟಪಡುತ್ತೀರಾ? ಹಾಗಿದ್ದರೆ ಅವು ಉಂಟುಮಾಡುವ ಅಪಾಯಗಳ ಬಗ್ಗೆಯೂ ನೀವು ತಿಳಿದಿರಬೇಕು. ಅಂತಹ ಅಪಾಯಗಳಲ್ಲೊಂದಾಗಿದೆ ಒಂದು ವಿಧದ ಬ್ಯಾಕ್ಟೀರಿಯಾದ ಸೋಂಕಿಗೊಳಗಾದ ಆಹಾರ ಸೇವನೆಯಿಂದ ಬರುವ ಕಾಯಿಲೆ ‘ಲಿಸ್ಟರಿಯಾ’. ವೈಜ್ಞಾನಿಕವಾಗಿ ‘ಲಿಸ್ಟರಿಯಾ ಮೊನೊಸೈಟೊಜಿನೆಸ್’ ಎಂದು ಕರೆಯಲಾಗುವ ಇದು ಮಾರಣಾಂತಿಕ ಸೋಂಕು ಎಂಬ ಕುಖ್ಯಾತಿ ಪಡೆದಿದ್ದು, ಹಲವಾರು ಸಾವುಗಳಿಗೆ ಕಾರಣವಾಗಿದೆ. ವಯಸ್ಸಾದವರು, ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿಯುಳ್ಳ ವರು ಈ ಸೋಂಕಿಗೆ ಸುಲಭವಾಗಿ ಗುರಿಯಾಗುತ್ತಾರೆ.

ಈ ಮೇಲಿನ ಗುಂಪುಗಳನ್ನು ಹೊರತುಪಡಿಸಿ ಇತರ ಆರೋಗ್ಯವಂತ ವಯಸ್ಕರಲ್ಲಿ ಈ ಸೋಂಕು ಕಾಣಿಸಿಕೊಳ್ಳುವುದು ಅಪರೂಪ. ಇದರ ಲಕ್ಷಣಗಳು ತುಂಬ ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. 3 ದಿನಗಳಿಂದ ಹಿಡಿದು 70 ದಿನಗಳವರೆಗೂ ಈ ಲಕ್ಷಣಗಳು ಅವ್ಯಕ್ತವಾಗಿರುವುದರಿಂದ ವ್ಯಕ್ತಿಯೋರ್ವ ಲಿಸ್ಟರಿಯಾ ಪೀಡಿತನಾಗಿದ್ದಾನೆಯೇ ಎನ್ನುವುದನ್ನು ನಿರ್ಧರಿಸುವುದು ಸುಲಭವಲ್ಲ. ಜ್ವರ, ಮಾಂಸಖಂಡಗಳಲ್ಲಿ ನೋವು ಲಿಸ್ಟರಿಯಾದ ಲಕ್ಷಣಗಳಲ್ಲಿ ಸೇರಿವೆ. ಕೆಲವೊಮ್ಮೆ ವ್ಯಕ್ತಿಯಲ್ಲಿ ವಾಕರಿಕೆ ಅಥವಾ ಅತಿಸಾರವೂ ಕಾಣಿಸಿಕೊಳ್ಳಬಹುದು.

ಒಮ್ಮೆ ಸೋಂಕು ಹರಡಿ ನರಮಂಡಲದ ಮೇಲೆ ಪರಿಣಾಮವನ್ನುಂಟು ಮಾಡಿತೆಂದರೆ ತಲೆನೋವು, ಸಮತೋಲನ ನಷ್ಟ, ಪೆಡಸಾದ ಕುತ್ತಿಗೆ ಇತ್ಯಾದಿ ಲಕ್ಷಣಗಳೂ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಗರ್ಭಿಣಿಯರಲ್ಲಿ ಸಾಮಾನ್ಯ ಜ್ವರದಂತಹ ಲಕ್ಷಣಗಳು ಕಂಡು ಬರುವುದು ಹೆಚ್ಚು, ಆದರೆ ಇದು ಭ್ರೂಣಕ್ಕೆ ಅಥವಾ ನವಜಾತ ಶಿಶುವಿಗೆ ಅಪಾಯ ವನ್ನುಂಟು ಮಾಡಬಹುದು. ಗರ್ಭಪಾತ, ಮೃತಶಿಶುವಿನ ಜನನ, ತಿಂಗಳು ತುಂಬುವ ಮೊದಲೇ ಹೆರಿಗೆ ಮತ್ತು ನವಜಾತ ಶಿಶುವಿನಲ್ಲಿ ಮಾರಣಾಂತಿಕ ಸೋಂಕಿಗೂ ಕಾರಣವಾಗಬಹುದು.

ಲಿಸ್ಟಿರಿಯಾ ಆಗಾಗ್ಗೆ ಧುತ್ತೆಂದು ಹರಡಿ ಜನರನ್ನು ಅನಾರೋಗ್ಯಕ್ಕೆ ಗುರಿ ಮಾಡಿರುವ ಮತ್ತು ಜೀವಗಳನ್ನು ಬಲಿ ತೆಗೆದುಕೊಂಡಿರುವುದೂ ಇದೆ. ಈ ಮಾರಣಾಂತಿಕ ಸೋಂಕು ಡೈರಿ ಉತ್ಪನ್ನಗಳೊಂದಿಗೆ, ವಿಶೇಷವಾಗಿ ಚೀಸ್‌ನೊಂದಿಗೆ ತಳುಕು ಹಾಕಿಕೊಂಡಿದೆ.

ಈ ಸೋಂಕಿಗೆ ಕಾರಣಗಳು ಮತ್ತು ಅದು ಹೇಗೆ ನಮ್ಮ ಶರೀರವನ್ನು ಸೇರುತ್ತದೆ ಎಂಬ ಕುರಿತು ಮಾಹಿತಿಗಳಿಲ್ಲಿವೆ…..

ಲಿಸ್ಟರಿಯಾ ಮೊನೊಸೈಟೊಜಿನೆಸ್ ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವ ಆಹಾರದ ಸೇವನೆ ಈ ಸೋಂಕಿಗೆ ಕಾರಣವಾಗಿದೆ. ಈ ಸೋಂಕು ಸಾಂಕ್ರಾಮಿಕವಲ್ಲದಿದ್ದರೂ ಗರ್ಭಾವಸ್ಥೆಯಲ್ಲಿ ತಾಯಿಗೆ ಸೋಂಕು ತಗುಲಿದ್ದರೆ ಅದು ನವಜಾತ ಶಿಶುವಿಗೂ ಹರಡುತ್ತದೆ.

ವ್ಯಕ್ತಿಗಳಲ್ಲಿ ಈ ಸೋಂಕಿನ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದರೆ ಅದಕ್ಕಾಗಿ ನಿರ್ದಿಷ್ಟ ಚಿಕಿತ್ಸೆಯನ್ನು ಪಡೆಯಬೇಕಾಗಿಲ್ಲ. ಆದರೆ ಲಕ್ಷಣಗಳು ಗಂಭೀರವಾಗಿದ್ದರೆ ಆಯಂಟಿಬಯಾಟಿಕ್ಸ್‌ಗಳ ನೆರವಿನಿಂದ ಗುಣಪಡಿಸಬಹುದು. ಹೀಗಾಗಿ ಲಿಸ್ಟರಿಯಾಕ್ಕೆ ಚಿಕಿತ್ಸೆಯು ಸೋಂಕಿನ ತೀವ್ರತೆಯನ್ನು ಅವಲಂಬಿಸಿರುತ್ತದೆ.

ಲಿಸ್ಟರಿಯಾಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಮಣ್ಣು ಮತ್ತು ನೀರಿನಲ್ಲಿ ಕಂಡು ಬರುತ್ತವೆ. ಹೀಗಾಗಿ ಮಣ್ಣಿನಿಂದ ಅಥವಾ ಮಣ್ಣಿಗೆ ಸೇರಿಸಲಾದ ರಸಗೊಬ್ಬರಗಳಿಂದ ಕಲುಷಿತಗೊಂಡ ತರಕಾರಿಗಳ ಸೇವನೆಯಿಂದ ಈ ಬ್ಯಾಕ್ಟೀರಿಯಾಗಳು ನಮ್ಮ ಶರೀರವನ್ನು ಸೇರಿಕೊಳ್ಳಬಹುದು. ಈ ಬ್ಯಾಕ್ಟೀರಿಯಾಗಳು ಪ್ರಾಣಿಗಳಲ್ಲಿಯೂ ಇದ್ದು, ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಕಲುಷಿತಗೊಳಿಸುತ್ತವೆ.

ಚೀಸ್‌ನಂತಹ ಸಂಸ್ಕರಿತ ಆಹಾರಗಳು ಮತ್ತು ಪಾಶ್ಚುರೈಸ್ ಆಗಿರದ ಹಾಲಿನಿಂದ ತಯಾರಿಸಲಾದ ಉತ್ಪನ್ನಗಳಲ್ಲಿ ಈ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಆಹಾರ ಸಂಸ್ಕರಣೆ ಸ್ಥಾವರಗಳಲ್ಲಿ ಬದುಕುಳಿಯುವ ಸಾಮರ್ಥ್ಯವನ್ನು ಹೊಂದಿರುವ ಈ ಬ್ಯಾಕ್ಟೀರಿಯಾಗಳು ಸಂಸ್ಕರಿತ ಮಾಂಸದಲ್ಲಿಯೂ ಸೇರಿಕೊಳ್ಳುತ್ತವೆ.

ಲಿಸ್ಟರಿಯಾ ದಾಳಿಯನ್ನು ತಡೆಯುವುದು ಹೇಗೆ?

ನೀವು ಸಾಮಗ್ರಿಗಳನ್ನು ಖರೀದಿಸಿದಾಗ ಮಾಂಸ ಮತ್ತು ಪೌಲ್ಟ್ರಿ ಉತ್ಪನ್ನಗಳಿದ್ದರೆ ಅವುಗಳನ್ನು ಇತರ ಸಾಮಗ್ರಿಗಳಿಂದ ಪ್ರತ್ಯೇಕವಾಗಿ ಸಾಗಿಸಿ. ಎಲ್ಲ ಆಹಾರ ಪದಾರ್ಥಗಳನ್ನು ಸೂಕ್ತವಾಗಿ ದಾಸ್ತಾನಿಡಿ. ಲಿಸ್ಟರಿಯಾ ಬ್ಯಾಕ್ಟೀರಿಯಾಗಳು ತಂಪು ವಾತಾವರಣದಲ್ಲಿ ಸುಲಭವಾಗಿ ಬೆಳವಣಿಗೆಯಾಗುತ್ತವೆ. ಹೀಗಾಗಿ ನಿಮ್ಮ ಫ್ರಿಝ್ ಈ ಸೋಂಕು ಅಭಿವೃದ್ಧಿಗೊಳ್ಳಲು ಉತ್ತಮ ತಾಣವಾಗುತ್ತದೆ. ಆದ್ದರಿಂದ ಮಾಂಸ, ಮೀನು, ಪೌಲ್ಟ್ರಿ ಉತ್ಪನ್ನಗಳನ್ನು ಫ್ರಿಝ್ ನಲ್ಲಿ ಇಡುವ ಮುನ್ನ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಪ್ಯಾಕೇಜ್ ಲೇಬಲ್‌ನ್ನು ಪರಿಶೀಲಿಸಿ ಆಹಾರವನ್ನು ಯಾವಾಗ ಬಳಸಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಕಚ್ಚಾ ಉತ್ಪನ್ನಗಳನ್ನು ನಲ್ಲಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಅಲ್ಲದೆ ಅಡುಗೆ ತಯಾರಿಸುವಾಗ ಮತ್ತು ಅದನ್ನು ಬಳಸುವಾಗ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದೂ ಮುಖ್ಯವಾಗಿದೆ.

ಅಡುಗೆಯನ್ನು ಚೆನ್ನಾಗಿ ಬೇಯಿಸುವುದು ಮತ್ತು ಸರಿಯಾಗಿ ಮರುಬಿಸಿ ಮಾಡುವುದೂ ಮುಖ್ಯವಾಗಿದೆ. ಹಾಳಾದ ಅಡಿಗೆ ಪದಾರ್ಥಗಳನ್ನು ಅಡುಗೆ ಕೋಣೆಯಲ್ಲಿಡದೆ ಎಸೆದುಬಿಡಿ. ರೆಡಿಮೇಡ್ ಆಹಾರಗಳ ಸೇವನೆಯಿಂದ ಸಾಧ್ಯವಾದಷ್ಟು ದೂರವೇ ಇರಿ.

ಕಚ್ಚಾ, ಪಾಶ್ಚರೈಸ್ ಆಗಿರದ ಹಾಲಿನ ಉತ್ಪನ್ನಗಳಲ್ಲಿ ಲಿಸ್ಟರಿಯಾ ಬ್ಯಾಕ್ಟೀರಿಯಾಗಳು ಅಡಗಿರುವ ಹೆಚ್ಚಿನ ಸಾಧ್ಯತೆಯಿರುವುದರಿಂದ ಅಂತಹ ಉತ್ಪನ್ನಗಳನ್ನು ಸೇವಿಸುವಾಗ ಎಚ್ಚರಿಕೆಯಿಂದಿರಿ.

Comments are closed.