ಕರಾವಳಿ

ಉತ್ತರ ಕನ್ನಡ ಬಿಜೆಪಿ ಆಂತರಿಕ ಬಿಕ್ಕಟ್ಟು: ನಾಯಕರಿಗೆ ಇಕ್ಕಟ್ಟು

Pinterest LinkedIn Tumblr


ಕಾರವಾರ: ವಿಧಾನಸಭೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಭಟ್ಕಳಕ್ಕೆ ನಾಮಧಾರಿ ಸಮಾಜದ ಸುನೀಲ್‌ ನಾಯ್ಕ ಎಂಬ ಹೊಸ ಮುಖಕ್ಕೆ ಬಿಜೆಪಿ ಅವಕಾಶ ನೀಡಿದೆ. ಖಾಸಗಿ ಬ್ಯಾಂಕ್‌ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ಸುನೀಲ್‌ ನಾಯ್ಕ ನಾಲ್ಕು ಜನರಲ್ಲಿ ಎದ್ದು ಕಾಣುವ ವ್ಯಕ್ತಿತ್ವ. ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಕಾಣಿಸಿಕೊಂಡು ರಾಜಕೀಯ ಮಹತ್ವಾಕಾಂಕ್ಷಿಯಾಗಿದ್ದ ಅವರಿಗೆ ವರಿಷ್ಠರು ಟಿಕೆಟ್‌ ನೀಡಿದ್ದಾರೆ.

ಮಾಜಿ ಸಚಿವ ಶಿವಾನಂದ ನಾಯ್ಕ, ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿದ್ದ ಜೆ.ಡಿ. ನಾಯ್ಕ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಶಿವಾನಂದ ನಾಯ್ಕರನ್ನು ಹೇಗೋ ಯಡಿಯೂರಪ್ಪ ಸಮಾಧಾನಪಡಿಸಬಹುದು. ಜೆ.ಡಿ. ನಾಯ್ಕ ಕಾಂಗ್ರೆಸ್‌ ಸಂಸ್ಕೃತಿ ಮನುಷ್ಯ. ಅವರನ್ನು ಬಿಜೆಪಿ ಕಾರ್ಯಕರ್ತರು ಮನಃಪೂರ್ವಕವಾಗಿ ಸ್ವಾಗತಿಸಿರಲಿಲ್ಲ. ಹಾಗಾಗಿ ಅವರು ಬಂಡೇಳುವ ಲಕ್ಷಣಗಳು ಕಡಿಮೆ. ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್‌ ನೊಂದಿಗೆ ಅಂಥ ಸಂಬಂಧವೂ ಇರಲಿಲ್ಲ. ಪಕ್ಷೇತರ ಶಾಸಕ ಮಂಕಾಳು ವೈದ್ಯರು ಬಲಾಡ್ಯರಾಗಿದ್ದು, ಸಿಎಂ ಸಿದ್ದರಾಮಯ್ಯನವರಿಗೆ ಹತ್ತಿರದ ಮನುಷ್ಯ. ಇವರನ್ನು ಮಣಿಸಲು ಆರ್ಥಿಕವಾಗಿ ಸಬಲ ಮನುಷ್ಯನನ್ನು ಬಿಜೆಪಿ ಹುಡುಕಾಡುತ್ತಿತ್ತು. ಅಂತ ವೇಳೆ ಸಿಕ್ಕವರೇ ಸುನೀಲ್‌ ನಾಯ್ಕ. ಈಗ ಅವರು ಭಟ್ಕಳ ಕ್ಷೇತ್ರದ ಜನರ ಮನಗೆಲ್ಲುವರೇ ಎಂಬುದನ್ನು ಕಾದು ನೋಡಬೇಕು. ಸುನೀಲ್‌ ನಾಯ್ಕ ನಾಮಧಾರಿ ಸಮುದಾಯಕ್ಕೆ ಸೇರಿದವರಾದ ಕಾರಣ ಮಾಜಿ ಸಚಿವ ಶಿವಾನಂದ ನಾಯ್ಕ ಮತ್ತು ಅದೇ ಸಮುದಾಯದ ಜೆ.ಡಿ.ನಾಯ್ಕ ತಟಸ್ಥರಾಗಿ ಬೆಂಬಲಿಸುವ ನಿರ್ಧಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚು.

ಹಳಿಯಾಳ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿದ್ದ ಸುನೀಲ್‌ ಹೆಗಡೆಗೆ ಟಿಕೆಟ್‌ ಸಿಕ್ಕಿದೆ. ಎರಡು ವರ್ಷಗಳಿಂದ ಬಿಜೆಪಿ ಸಂಸ್ಕೃತಿ ಮತ್ತು ಮಾತುಗಾರಿಕೆ ಸುನೀಲ್‌ ಹೆಗಡೆ ರೂಢಿಸಿಕೊಂಡಿದ್ದು, ಅವರು ಸಚಿವ ದೇಶಪಾಂಡೆಗೆ ಪ್ರಬಲ ಪ್ರತಿಸ್ಪರ್ಧೆ ನೀಡುವ ತರಾತುರಿಯಲ್ಲಿದ್ದಾರೆ. ಹಳಿಯಾಳದಲ್ಲಿ ಸುನೀಲ್‌ ಹೆಗಡೆ ಅವರ ವಿರುದ್ಧ ಬಿಜೆಪಿಯಲ್ಲಿ ಬಂಡಾಯ ಏಳುವವರು ಇಲ್ಲವಾಗಿದೆ.

ಯಲ್ಲಾಪುರ ಬಿಎಸ್‌ವೈ ಆಪ್ತರಿಗೆ
ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಸಹ ಕುತೂಹಲ ಹುಟ್ಟಿಸಿತ್ತು. ಇಲ್ಲಿ ಬಿಜೆಪಿ ಮಹಿಳೆಯರು ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್‌ನಿಂದ ಬಂದಿದ್ದ ಜಿಪಂ ಸದಸ್ಯ ಎಲ್‌.ಟಿ. ಪಾಟೀಲ್‌ ಸಹ ಆಕಾಂಕ್ಷಿಯಾಗಿದ್ದರು. ಸ್ವತಃ ಸಂಸದ, ಹಾಲಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಸಹ ಇಲ್ಲಿಂದ ಸ್ಪರ್ಧಿಸಲಿದ್ದಾರೆಂಬ ಮಾತು ಇತ್ತು. ಅಲ್ಲದೇ ನರಸಿಂಹ ಕೋಣೆಮನೆ ಹೆಸರು ಸಹ ಕೇಳಿ ಬಂದಿತ್ತು. ಆದರೆ ಇವೆಲ್ಲಾ ರಾಜಕೀಯ ಲೆಕ್ಕಾಚಾರ ಹಿಂದಿಕ್ಕಿ, ಯಡಿಯೂರಪ್ಪ ಅವರ ಪರಮಾಪ್ತ ಶಾಸಕರಾಗಿದ್ದ ವಿ.ಎಸ್‌. ಪಾಟೀಲ್‌ ಮತ್ತೆ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ಪಕ್ಷ ನಿಷ್ಠೆ ಮತ್ತು ಯಡಿಯೂರಪ್ಪ ಅವರಲ್ಲಿನ ಶ್ರದ್ಧೆಯೇ ಕಾರಣವಾಗಿದೆ. ಲಿಂಗಾಯತ ವೀರಶೈವ ಮತಗಳ ಜೊತೆ ನಿಗರ್ವಿಯಾಗಿರುವ ವಿ.ಎಸ್‌. ಪಾಟೀಲರು ಸಹ ಮಾಡಿದ್ದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಅವರಿಗೆ ನೆರವಾಗುವ ಲಕ್ಷಣಗಳಿವೆ. ಶಿವರಾಮ ಹೆಬ್ಟಾರರನ್ನು ಎದುರಿಸಲು ಮಾಜಿ ಶಾಸಕ ವಿ.ಎಸ್‌. ಪಾಟೀಲರೇ ಸಮರ್ಥರು ಎಂದು ಪಕ್ಷ ಕೊನೆಗೂ ನಿರ್ಧರಿಸಿದೆ.

ಕಾರವಾರ ಕ್ಷೇತ್ರವನ್ನು ಹಿಂದುಳಿದ ವರ್ಗದ ಮಹಿಳೆಗೆ ಮೊಟ್ಟ ಮೊದಲ ಬಾರಿಗೆ ಟಿಕೆಟ್‌ ನೀಡಿ ಪ್ರಯೋಗಶೀಲತೆ ಮೆರೆದಿದೆ. ಅಲ್ಲದೇ ಮಹಿಳಾ ಮತದಾರರೇ ಹೆಚ್ಚಿರುವ ಕಾರವಾರ ಕ್ಷೇತ್ರದಲ್ಲಿ ರೂಪಾಲಿ ನಾಯ್ಕರಿಗೆ ಟಿಕೆಟ್‌ ನೀಡಿದ್ದು, ಹಾಲಿ ಶಾಸಕರ ವಿರುದ್ಧ ಇರುವ ಸ್ವಲ್ಪ ಮಟ್ಟಿನ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಇನ್ನು ಶಿರಸಿ ಕ್ಷೇತ್ರದಲ್ಲಿ ಹಿರಿಯ ರಾಜಕಾರಣಿ, 5 ಸಲ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅನಾಯಾಸವಾಗಿ ಟಿಕೆಟ್‌ ದಕ್ಕಿದೆ

ಸಾಮಾಜಿಕ ನ್ಯಾಯ ಕಾಪಾಡಿದ ಬಿಜೆಪಿ
ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡುವಾಗ ಬಿಜೆಪಿ ಸಾಮಾಜಿಕ ನ್ಯಾಯ ಕಾಪಾಡಿದೆ. ಹಳಿಯಾಳ, ಶಿರಸಿ ಕ್ಷೇತ್ರಗಳನ್ನು ಬ್ರಾಹ್ಮಣರಿಗೆ ನೀಡಿದೆ. ಯಲ್ಲಾಪುರ ಕ್ಷೇತ್ರವನ್ನು ಲಿಂಗಾಯತರಿಗೆ, ಭಟ್ಕಳದಲ್ಲಿ ಬಹುಸಂಖ್ಯಾತ ನಾಮಧಾರಿ ಸಮುದಾಯಕ್ಕೆ ನೀಡಿದೆ. ಕಾರವಾರದಲ್ಲಿ ಹಿಂದುಳಿದ ವರ್ಗದ ಮಹಿಳೆಗೆ ಮಣೆ ಹಾಕಿದೆ. ಕುಮಟಾವನ್ನು ಹಿಂದೂ ಸಮಾಜದ ಅತೀ ಸಣ್ಣ ಸಮುದಾಯ ಗಾಣಿಗ ಶೆಟ್ಟರಿಗೆ ನೀಡುತ್ತದೆಯೋ ಅಥವಾ ನಾಮಧಾರಿ ಸಮಾಜದ ಸೂರಜ್‌ ಸೋನಿಗೆ ಮತ್ತೂಮ್ಮೆ ಅವಕಾಶ ನೀಡುತ್ತದೆಯೋ ಅಥವಾ ಹಾಲಕ್ಕಿ ಮಹಿಳೆಯನ್ನು ದುತ್ತನೇ ಕಣಕ್ಕೆ ಇಳಿಸುತ್ತದೆಯೋ, ಮೀನುಗಾರ ಸಮುದಾಯಕ್ಕೆ ಅವಕಾಶ ಕಲ್ಪಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕು. ಸದ್ಯದ ಟಿಕೆಟ್‌ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ.

ಕುಮಟಾ ಇನ್ನೂ ಕಗ್ಗಂಟು
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಘೋಷಣೆ ಬಿಜೆಪಿ ಪಾಲಿಗೆ ಕಗ್ಗಂಟಾಗಿದೆ. ಅಲ್ಲಿ ಸೂರಜ್‌ ನಾಯ್ಕ, ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿರುವ ಮಾಜಿ ಶಾಸಕ ದಿನಕರ ಶೆಟ್ಟಿ ನಡುವೆ ಟಿಕೆಟ್‌ಗೆ ಭಾರೀ ಪೈಪೋಟಿ ನಡೆದಿದೆ. ದಿನಕರ ಶೆಟ್ಟಿಗೆ ಟಿಕೆಟ್‌ ನೀಡಿದರೆ ಬಿಜೆಪಿ ಬಂಡಾಯ ಅಭ್ಯರ್ಥಿ ಎದುರಿಸಬೇಕಾಗಿದೆ ಎಂಬ ಆಂತರಿಕ ವರದಿ ಪಕ್ಷಕ್ಕೆ ತಲುಪಿದೆ. ಹಾಗಾಗಿ ಬಿಜೆಪಿ ಬಿಕ್ಕಟ್ಟಿನ ಸನ್ನಿವೇಶವನ್ನು ಕುಮಟಾದಲ್ಲಿ ಎದುರಿಸುತ್ತಿದೆ. ಅಲ್ಲದೇ ಇನ್ನಿಬ್ಬರು ಟಿಕೆಟ್‌ ಆಕಾಂಕ್ಷಿಗಳಾದ ಉದ್ಯಮಿ ಯಶೋಧರ ನಾಯ್ಕ, ಮಾಜಿ ಅರಣ್ಯಾಧಿಕಾರಿ ನಾಗರಾಜ ನಾಯಕ ತೊರ್ಕೆ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇದರಲ್ಲಿ ಯಶೋಧರ ನಾಯ್ಕ ನಾಮಧಾರಿ ಸಮುದಾಯದವರು. ನಾಗರಾಜ ನಾಯಕ ನಾಡವರ ಸಮಾಜದವರು. ನಾಮಧಾರಿ ಸಮಾಜಕ್ಕೆ ಭಟ್ಕಳದಲ್ಲಿ ಅವಕಾಶ ನೀಡಿರುವ ಕಾರಣ ದಿನಕರ ಶೆಟ್ಟಿ ಅವರಿಗೆ ಟಿಕೆಟ್‌ ಬಹುತೇಕ ಖಚಿತವಾಗಲಿದೆ. ಮೇಲಾಗಿ ಅವರು ಹಾಲಿ ಶಾಸಕಿ ಶಾರದಾ ಮೋಹನ ಶೆಟ್ಟಿ ವಿರುದ್ಧ ಅತ್ಯಲ್ಪ (420) ಮತಗಳಿಂದ ಸೋತಿದ್ದರು ಎಂಬ ಅನುಕಂಪ ಇದ್ದೇ ಇದೆ. ಕುಮಟಾ ಸದ್ಯಕ್ಕೆ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ.

ನಾಗರಾಜ್‌ ಹರಪನಹಳ್ಳಿ

-ಉದಯವಾಣಿ

Comments are closed.