ರಾಷ್ಟ್ರೀಯ

ದಲಿತನನ್ನು ಹೆಗಲ ಮೇಲೆ ಹೊತ್ತು ಗರ್ಭಗುಡಿ ಪ್ರವೇಶಿಸಿದ ಅರ್ಚಕ

Pinterest LinkedIn Tumblr


ಹೈದರಾಬಾದ್‌: ದಲಿತ ಭಕ್ತನನ್ನು ಬ್ರಾಹ್ಮಣ ಅರ್ಚಕ ತನ್ನ ಹೆಗಲ ಮೇಲೆ ಕೂರಿಸಿಕೊಂಡು ದೇವಸ್ಥಾನದ ಒಳಗೆ ಹೋಗುವ ಮೂಲಕ ಮಾನವ ಜಾತಿ ಒಂದೇ ಎಂಬ ಸಂದೇಶ ಸಾರಿದ್ದಾರೆ.

ಹೈದರಾಬಾದ್‌ನ ಜಿಯಾಗುಡದಲ್ಲಿರುವ ಶ್ರೀ ರಂಗನಾಥ ದೇವಾಲಯ ಇಂಥದೊಂದು ಅಪೂರ್ವ ಘಟನೆಗೆ ಸಾಕ್ಷಿಯಾಯಿತು. ಚಿಲ್ಕೂರ್ ಬಾಲಾಜಿ ದೇವಾಲಯದ ಅರ್ಚಕ ಸಿ ಎಸ್‌ ರಂಗರಾಜನ್‌ ಅವರು 25 ವರ್ಷದ ದಲಿತ ಭಕ್ತ ಆದಿತ್ಯ ಪರಶ್ರೀಯ ಕೊರಳಿಗೆ ಹೂವಿನ ಹಾರ ಹಾಕಿ ಹೆಗಲ ಮೇಲೆ ಹೊತ್ತುಕೊಂಡು ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದಾಗ ಅನ್ನಮಾಚಾರ್ಯ ಕೀರ್ತನೆ ‘ಬ್ರಹ್ಮ ಒಕ್ಕಟೆ, ಪರ ಬ್ರಹ್ಮ ಒಕ್ಕಟೆ’ ಹಾಗೂ ನಾದಸ್ವರಗಳು ಮೊಳಗುತ್ತಿದ್ದೆವು.

ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಲು 2700 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಇದೇ ರೀತಿಯ ‘ಮುನಿ ವಾಹನ ಸೇವಾ’ವನ್ನು ಮಾಡಿದ್ದರು.

ಅರ್ಚಕ ರಂಗರಾಜನ್‌ ಮಾತನಾಡುತ್ತ ‘ ಕೆಲ ಮೂಲಭೂತ ವಾದಿಗಳು ಸ್ವ ಹಿತಾಸಕ್ತಿಯಿಂದ ಧರ್ಮ, ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ಬೇರೆ ಮಾಡುತ್ತಿದ್ದು ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿದ್ದಾರೆ. ಜನವರಿಯಲ್ಲಿ ಓಸ್ಮಾನಿಯಾ ವಿಶ್ವ ವಿದ್ಯಾನಿಲಯದಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗಿಯಾಗಿದ್ದೆ, ಅದರಲ್ಲಿ ಹಿಂದುಳಿದವರಿಗೆ ದೇವಸ್ಥಾನ ಪ್ರವೇಶ ನಿಷೇಧ ಇರುವುದರ ಬಗ್ಗೆ ಚರ್ಚೆ ನಡೆಯಿತು. ಎಲ್ಲರೂ ಒಂದೇ ಎಂಬ ಸಂದೇಶ ಸಾರಲು ಹೀಗೆ ಮಾಡಿದೆ’ ಎನ್ನುತ್ತಾರೆ.

ರಂಗರಾಜನ್ ಮಾಡಿದ ಕಾರ್ಯವನ್ನು ನೆರೆದಿದ್ದವರು ಚಪ್ಪಾಳೆ ಮೂಲಕ ಸ್ವಾಗತಿಸಿದರು. ಈ ಮಹತ್ವದ ಘಟನೆಗೆ ಚಿಲ್ಕೂರ್‌ ಬಾಲಾಜಿ ದೇವಾಲಯ ಮುಖ್ಯಸ್ಥ ಸುಂದರರಾಜನ್‌ (ರಂಗರಾಜನ್‌ ಅವರ ತಂದೆ), ದೇವಾಲಯದ ಸಂಸ್ಥಾಪಕ ಟ್ರಸ್ಟಿಯಾಗಿರುವ ಎಸ್‌ ಟಿ ಛಾರಿ, ತೆಲಂಗಾಣ ಸರಕಾರದ ಪ್ರತಿನಿಧಿಯಾಗಿ ವೇಣು ಗೋಪಾಲ ಚಾರಿ ಮುಂತಾದವರು ಸಾಕ್ಷಿಯಾಗಿದ್ದರು.

Comments are closed.