
ಮಂಗಳೂರು, ಎಪ್ರಿಲ್. 2: ನಿಷ್ಕಲ್ ರಾವ್ (9ನೇ ತರಗತಿಯ ವಿದ್ಯಾರ್ಥಿ) ಸಂಗ್ರಹಿಸಿದ ತುಳು ಲಿಪಿಯಲ್ಲೇ ಮುದ್ರಿತವಾಗಿರುವ ‘ಶ್ರೀ ಹರಿಸ್ತುತಿ’ ಪುಸ್ತಕ ರವಿವಾರ ನಗರದ ಶಾರದಾ ವಿದ್ಯಾಲಯದಲ್ಲಿ ಬಿಡುಗಡೆಗೊಂಡಿತು.

ಸಂಪೂರ್ಣ ಗಣಕೀಕರಣಗೊಂಡ ತುಳು ಲಿಪಿಯಲ್ಲಿ ಮುದ್ರಣಗೊಂಡ ಶ್ರೀ ಹರಿಸ್ತುತಿಯನ್ನು ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ. ಬಿ ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ಉಡುಪಿಯ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀ ವರ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಈ ಹಿಂದೆ ತಾಳೆ ಗರಿಗಳಲ್ಲಿ ತುಳು ಲಿಪಿಯ ಕೃತಿ ರಚನೆ ನಡೆದಿತ್ತು.ಕನ್ನಡ ಲಿಪಿಯನ್ನು ಬಳಸಿಕೊಂಡು ಹೆಚ್ಚಿನ ತುಳು ಕೃತಿಗಳು ರಚನೆಯಾಗಿವೆ. ತುಳು ಸಾಹಿತ್ಯದಲ್ಲಿ ಗಣಕೀಕರಣ ಗೊಂಡ ತುಳು ಲಿಪಿಯಲ್ಲಿ ರಚನೆಗೊಂಡ ಪ್ರಪ್ರಥಮ ಕೃತಿಯಾದ ಶ್ರೀ ಹರಿಸ್ತುತಿ ತುಳು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ ಘಟನೆಯಾಗಿದೆ ಎಂದು ಶುಭ ಹಾರೈಸಿದರು.
ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಕದ್ರಿ ದೇವಾಲಯ ಮುಖ್ಯ ಅರ್ಚಕ ವಿದ್ವಾನ್ ಕದ್ರಿ ಪ್ರಭಾಕರ ಅಡಿಗ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ , ತುಳು ಜ್ಞಾತಿಪದಕೋಶ ಪ್ರಧಾನ ಸಂಪಾದಕ ಡಾ.ಪದ್ಮನಾಭ ಕೇಕುಣ್ಣಾಯ, ಕೃತಿ ಸಂಗ್ರಹಿಸಿದ ಮಾಸ್ಟರ್.ನಿಷ್ಕಲ್ ರಾವ್,ಮಾರ್ಗದರ್ಶನ ನೀಡಿದ ಡಾ.ಕದ್ರಿ ಪ್ರಭಾಕರ ಅಡಿಗ,ಉಷಾ ಎಸ್ ರಾವ್,ಮೀರಾ ಹಾಗೂ ಅತುಲ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಮಾ.ಸದ್ಗುಣ್ ಐತಾಳ್‌ರಿಂದ ಮ್ಯಾಂಡೋಲಿನ್ ವಾದನ ಕಚೇರಿ :
ಕಾರ್ಯಕ್ರಮದ ಬಳಿಕ ಮಾ.ಸದ್ಗುಣ್ ಐತಾಳ್‌ರಿಂದ ಮ್ಯಾಂಡೋಲಿನ್ ವಾದನ ಕಚೇರಿ ನಡೆಯಿತು.
Comments are closed.