ರಾಷ್ಟ್ರೀಯ

ದಿಲ್ಲಿಯಲ್ಲೀಗ ವಿಶ್ವದ ಅತ್ಯಂತ ಪರಿಶುದ್ಧ ಪಟ್ರೋಲ್‌, ಡೀಸಿಲ್‌ ಲಭ್ಯ

Pinterest LinkedIn Tumblr


ಹೊಸದಿಲ್ಲಿ : ದೇಶದಲ್ಲಿ ವಾಯು ಮಾಲಿನ್ಯ ಕಳವಳಕಾರಿ ಮಟ್ಟಕ್ಕೆ ಏರುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಿ ಒಡೆತನದ ತೈಲ ಕಂಪೆನಿಗಳು, ಗಡುವು ತೀರುವ ಎರಡು ವರ್ಷಗಳ ಮೊದಲೇ, ದಿಲ್ಲಿಯಲ್ಲಿ ಯೂರೋ 6 ಗ್ರೇಡ್‌ ಇಂಧನವನ್ನು ಬಿಡುಗಡೆ ಮಾಡಿವೆ. ಅಂತೆಯೇ ದಿಲ್ಲಿಯಲ್ಲೀಗ ವಿಶ್ವದ ಅತ್ಯಂತ ಪರಿಶುದ್ಧ ಪಟ್ರೋಲ್‌ ಮತ್ತು ಡೀಸಿಲ್‌ ಗ್ರಾಹಕರಿಗೆ ಲಭ್ಯವಿದೆ.

ನಿನ್ನೆ ಭಾನುವಾರದಿಂದ ತೊಡಗಿ ದಿಲ್ಲಿಯು ಯೂರೋ 4 ಗ್ರೇಡ್‌ ಇಂಧನದಿಂದ ಯೂರೋ 6 ಗ್ರೇಡ್‌ ಇಂಧನಕ್ಕೆ ಜಿಗಿದ ದೇಶದ ಪ್ರಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಿಲ್ಲಿಯಲ್ಲಿ ಈಗ ಲಭ್ಯವಿರುವ ಈ ಪರಿಶುದ್ಧ ಇಂಧನವು 50 ಪಾರ್ಟ್‌ ಪರ್‌ ಮಿಲಿಯನ್‌ಗೆ ಬದಲಾಗಿ ಟೆನ್‌ ಪಾರ್ಟ್‌ ಪರ್‌ ಮಿಲಿಯನ್‌ (ಪಿಪಿಎಂ) ಸಲ್‌ಫ‌ರ್‌ ಹೊಂದಿದೆ.

ಈ ಸಂಬಂಧ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ತೈಲ ಸಚಿವ ಧರ್ಮೇಂದ್ರ ಪ್ರಧಾನ್‌ “ತೈಲ ಕಂಪೆನಿಗಳು ಗ್ರಾಹಕರಿಗೆ ಪರಿಶುದ್ಧ ಇಂಧನ ಪೂರೈಸುವ ತಮ್ಮ ಬದ್ಧತೆಯನ್ನು ಕಾಯ್ದುಕೊಂಡಿವೆ. ಆ ಪ್ರಕಾರ ಈಗಿನ್ನು ಯೂರೋ 6 ಗ್ರೇಡ್‌ನ‌ ಮೋಟಾರು ವಾಹನಗಳನ್ನು ಪರಿಚಯಿಸುವ ಬದ್ಧತೆ ಆಟೋಮೊಬೈಲ್‌ ಕೈಗಾರಿಕೆಯದ್ದಾಗಿದೆ’ ಎಂದು ಹೇಳಿದರು.

ಅತ್ಯಂತ ಪರಿಶುದ್ಧ ಬಿಎಸ್‌ 6 ಗ್ರೇಡ್‌ ಪೆಟ್ರೋಲ ಮತ್ತು ಡೀಸಿಲ್‌ ಪೂರೈಸುವ ಸಲುವಾಗಿ ತಂತ್ರಜ್ಞಾನ ಮತ್ತು ಸಂಸ್ಕರಣ ಪ್ರಕ್ರಿಯೆಗಳನ್ನು ಮೇಲ್ಮಟ್ಟಕ್ಕೆ ಏರಿಸಲು ತೈಲ ಕಂಪೆನಿಗಳು 30,000 ಕೋಟಿ ರೂ. ಹಣವನ್ನು ಹೂಡಿವೆ. ಇದರ ಫ‌ಲವಾಗಿ 2010ರೊಳಗೆ ದೇಶಾದ್ಯಂತ ಅತ್ಯಂತ ಪರಿಶುದ್ಧ ಇಂಧನವನ್ನು ಪೂರೈಸುವ ಬದ್ಧತೆಯನ್ನು ಅವು ಪೂರೈಸುವ ವಿಶ್ವಾಸವಿದೆ’ ಎಂದು ಪ್ರಧಾನ್‌ ಹೇಳಿದರು.

-ಉದಯವಾಣಿ

Comments are closed.