ಕರಾವಳಿ

ಇಂದು ಏಸು ಕ್ರಿಸ್ತರು ಶಿಲುಬೆಗೇರಿದ ದಿನ : ಕ್ರೈಸ್ತ ಬಾಂಧವರಿಂದ ವಿಶೇಷ ಪ್ರಾರ್ಥನೆಯೊಂದಿಗೆ ‘ಗುಡ್ ಫ್ರೈಡೇ’ ಆಚರಣೆ

Pinterest LinkedIn Tumblr

ಮಂಗಳೂರು, ಮಾರ್ಚ್.30: ಯೇಸು ಕ್ರಿಸ್ತರು ಶಿಲುಬೆಗೇರಿದ ಸ್ಮರಣಾರ್ಥ ಆಚರಿಸಲಾಗುವ ಶುಭ ಶುಕ್ರವಾರ (ಗುಡ್ ಫ್ರೈಡೇ) ವನ್ನು ಶುಕ್ರವಾರ ಕರಾವಳಿಯ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯ ಜತೆಗೆ ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಯಿತು.

ಇಂದು ಗುಡ್ ಫ್ರೈಡೇ. ಜಗತ್ತಿಗೆ ಶಾಂತಿ, ಸೌಹಾರ್ದ, ಸಹೋದರತೆಯ ಸಂದೇಶ ಸಾರಿ ಮಾನವ ಪಾಪ ವಿಮೋಚನೆಗಾಗಿ ಏಸು ಕ್ರಿಸ್ತರು ಶಿಲುಬೆಗೇರಿದ ದಿನ. ಈ ಪವಿತ್ರ ದಿನವನ್ನು ನಾಡಿನಾದ್ಯಂತ ಭಕ್ತಿಯಿಂದ ಆಚರಿಸಲಾಗುತ್ತದೆ. ಯೇಸು ಕ್ರಿಸ್ತರು ತ್ಯಾಗ ಮಾಡಿ ತನ್ನನ್ನು ತಾನು ಅರ್ಪಣೆ ಮಾಡಿಕೊಂಡ ದಿನವೇ ಶುಭ ಶುಕ್ರವಾರ.

ಈ ಶುಭ ಶುಕ್ರವಾರ ದಿನವನ್ನು ಕಡಲತಡಿಯ ನಗರಿ ಮಂಗಳೂರಿನಲ್ಲೂ ಕ್ರೈಸ್ತ ಬಾಂಧವರು ಭಕ್ತಿ ಮತ್ತು ಶೃದ್ಧೆಯಿಂದ ಆಚರಿಸಿದರು. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ನಗರದ ಚರ್ಚ್‌ಗಳಿಗೆ ತೆರಳಿ ವಿಶೇಷ ಪಾರ್ಥನೆ ಸಲ್ಲಿಸಿದರು.

ಯೇಸು ಕ್ರಿಸ್ತರು ಶಿಲುಬೆಗೇರಿದ ಸಂಕೇತವಾಗಿ ಕ್ರೈಸ್ತ ಬಾಂಧವರು ಒಂದು ತಿಂಗಳ ಕಾಲ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಕಪ್ಪು ದಿನಗಳಾಗಿ ಈ ದಿನಗಳನ್ನು ಆಚರಿಸುತ್ತಾ, ವಿಶೇಷವಾಗಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದಂದಿನಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ತಮ್ಮ ಪ್ರಾಣವನ್ನು ತ್ಯಜಿಸಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ ‘ (ವೇ ಆ ದಿ ಕ್ರಾಸ್) ಆಚರಣೆಯನ್ನು ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳನ್ನು ಕ್ರೈಸ್ತ ಬಾಂಧವರು ಸ್ಮರಿಸಿಕೊಳ್ಳುತ್ತಾರೆ.

ಮಾತ್ರವಲ್ಲದೆ ಶುಭ ಶುಕ್ರವಾರದ ದಿನವನ್ನು ಕ್ರೈಸ್ತ ಬಾಂಧವರು ಯೇಸುವಿನ ಧ್ಯಾನ ಹಾಗೂ ಉಪವಾಸದಲ್ಲಿ ಕಳೆಯುತ್ತಾರೆ. ಯೇಸು ಕ್ರಿಸ್ತರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಆಚರಣೆ ಕ್ರೈಸ್ತ ಬಾಂಧವರಿಂದ ಭಕ್ತಿ, ಶ್ರದ್ಧೆಯಿಂದ ನಡೆಸಲಾಗುತ್ತದೆ.

ನಗರದ ಮಿಲಾಗ್ರಿಸ್ ಚರ್ಚ್ ಆವರಣದಲ್ಲಿ ಇಂದು ಬೆಳಗ್ಗೆ ‘ಶಿಲುಬೆಯ ಹಾದಿ’ (ವೇ ಆ ದಿ ಕ್ರಾಸ್) ಆಚರಣೆಯನ್ನು ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳನ್ನು ಕ್ರೈಸ್ತರು ಸ್ಮರಿಸಿದರು. ಕೆಲವು ಚರ್ಚ್‌ಗಳಲ್ಲಿ ಇಂದು ಅಪರಾಹ್ನದ ಬಳಿಕ ‘ಶಿಲುಬೆಯ ಹಾದಿ’ ಆಚರಣೆ ನೆರವೇರಲಿದೆ.

ಶುಭ ಶುಕ್ರವಾರದಂದು ವೌನ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಚರ್ಚ್‌ಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

Comments are closed.