ಅಂತರಾಷ್ಟ್ರೀಯ

ಪಾಕ್‌ನಿಂದ ಭಗತ್‌ಸಿಂಗ್‌ ಕಡತ ಪ್ರದರ್ಶನ

Pinterest LinkedIn Tumblr


ಲಾಹೋರ್‌: ಭಾರತದ ಸ್ವಾತಂತ್ರ್ಯ ಸೇನಾನಿ ಭಗತ್‌ ಸಿಂಗ್‌ ಅವರು ನೇಣುಗಂಬ ಏರಿದ 87 ವರ್ಷಗಳ ಬಳಿಕ ಅವರ ಕ್ರಾಂತಿಕಾರಿ ಹೋರಾಟಕ್ಕೆ ಸಂಬಂಧಿಸಿದ ಮಹತ್ವದ ಕಡತಗಳನ್ನು ಪಾಕಿಸ್ತಾನ ಸರಕಾರ ಗುರುವಾರ ಲಾಹೋರ್‌ನಲ್ಲಿ ಪ್ರದರ್ಶಿಸಿದೆ. ಗಲ್ಲು ಶಿಕ್ಷೆ ವಿಧಿಸಲು ಆದೇಶಿಸಿದ್ದ ಕಡತಗಳೂ ಇದರಲ್ಲಿ ಸೇರಿವೆ. ಭಾನುವಾರದವರೆಗೂ ಪ್ರದರ್ಶನ ಮುಂದುವರಿಯಲಿದ್ದು, ಸರಕಾರದ ಈ ಕ್ರಮಕ್ಕೆ ನಾಗರಿಕ ಸೇವಾ ಸಂಘಗಳು ಹಾಗೂ ಸಾಮಾಜಿಕ ಕಾರ‍್ಯಕರ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಭಗತ್‌ ಸಿಂಗ್‌ ಅವರ ಕ್ರಾಂತಿಕಾರಿ ಹೋರಾಟದ ಬಿಸಿ ತಾಳಲಾರದೇ ಬ್ರಿಟಿಷ್‌ ಸರಕಾರ ಪೊಲೀಸ್‌ ಅಧಿಕಾರಿ ಜಾನ್‌ ಪಿ.ಸೌಂಡರ್ಸ್‌ ಹತ್ಯೆಗೆ ದಾರಿ ಮಾಡಿಕೊಟ್ಟ ಲಾಹೋರ್‌ ಪಿತೂರಿ ಪ್ರಕರಣದಲ್ಲಿ 1931ರ ಮಾರ್ಚ್‌ 23ರಂದು ಭಗತ್‌ ಸಿಂಗ್‌, ರಾಜಗುರು, ಸುಖದೇವ್‌ ಅವರನ್ನು ಲಾಹೋರ್‌ನಲ್ಲಿ ಗಲ್ಲಿಗೇರಿಸಿತ್ತು. ಈ ಪ್ರಕರಣದ ಕಡತಗಳೂ ಸೇರಿದಂತೆ ಭಗತ್‌ ಅವರಿಗೆ ಸೇರಿದ ಕೆಲವು ದಾಖಲೆಗಳನ್ನು ಪ್ರದರ್ಶಿಸಲಾಗಿದೆ.

ಲಾಹೋರ್‌ನ ಬಾಂಬ್‌ ಫ್ಯಾಕ್ಟರಿಯನ್ನು ವಶಕ್ಕೆ ಪಡೆದುಕೊಂಡ ಸಿಐಡಿಯ ಡಿಐಜಿ ವರದಿ, ಸಿಂಗ್‌ ಮತ್ತವರ ಸಹಚರರಿಂದ ವಶಪಡಿಸಿಕೊಂಡ ರಿವಾಲ್ವರ್‌ಗಳು, ತರಹೇವಾರಿ ರಾಸಾಯನಿಕಗಳು, ಅಧಿಕಾರಿ ಸೌಂಡರ್ಸ್‌ನ ಮರಣೋತ್ತರ ಪರೀಕ್ಷಾ ವರದಿ, ಹಿಂದೂಸ್ತಾನ್‌ ಸೋಷಿಯಲಿಸ್ಟ್‌ ಆರ್ಮಿಯ ಪೋಸ್ಟರ್‌, ವಿವಿಧ ಪುಸ್ತಕ, ದಿನಪತ್ರಿಕೆಗಳು, 1931ರ ಮಾ. 5ರಂದು ಬಕಿಂಗ್‌ಹ್ಯಾಮ್‌ ಕೋರ್ಟ್‌ಗೆ ಈ ಮೂವರೂ ಸಲ್ಲಿಸಿದ್ದ ಅರ್ಜಿಯ ಪ್ರತಿ, ಭಗತ್‌ ಸಿಂಗ್‌ ಅವರು ತಂದೆ ಸರ್ಕಾರ್‌ ಕಿಶನ್‌ ಸಿಂಗ್‌ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸುವಂತೆ ಕೋರಿಕೊಂಡಿದ್ದ ಮನವಿ ಪತ್ರ, ನೌಜವಾನ್‌ ಭಾರತ್‌ ಸಭಾದ ಪ್ರಣಾಳಿಕೆ, ವೀರ್‌ಭಾರತ್‌ ಪತ್ರಿಕೆಯ ಕೆಲವು ಪ್ರತಿಗಳು ಇದರಲ್ಲಿ ಸೇರಿವೆ.

Comments are closed.