ಮಂಗಳೂರು, ಮಾರ್ಚ್. 28: ತನ್ನ ಪತಿಯ ವಿರುದ್ಧ ಹಫ್ತಾ ವಸೂಲಿ ಪ್ರಕರಣ ದಾಖಲಾಗಿರುವುದು ಸತ್ಯಕ್ಕೆ ದೂರವಾಗಿದ್ದು, ಸುರತ್ಕಲ್‌ನ ಕೆಲವು ಜಾತಿವಾದಿ ವ್ಯಕ್ತಿಗಳು ಹಾಗೂ ಭೂಗತ ಸಂಪರ್ಕ ಹೊಂದಿರುವ ಕೆಲ ವ್ಯಕ್ತಿಗಳು ತನ್ನ ಗಂಡನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಕೋಡಿಕೆರೆ ಮನೋಜ್ ಪತ್ನಿ ಸೌಮ್ಯಾ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಪತಿ ಮನೋಜ್ ಕೋಡಿಕೆರೆ ವಿರುದ್ಧ ಹಫ್ತಾ ವಸೂಲಿ ಪ್ರಕರಣ ದಾಖಲಾಗಿರುವುದು ಸತ್ಯಕ್ಕೆ ದೂರವಾಗಿದ್ದು, ಹಫ್ತಾ ವಸೂಲಿ ಪ್ರಕರಣದಲ್ಲಿ ಆರೋಪಿಯಾಗಿರುವ ಕಲ್ಲಡ್ಕದ ಮಿಥುನ್ ಪೂಜಾರಿ ಹಾಗೂ ಆಕಾಶಭವನದ ತಿಲಕ್ ರಾಜ್‌ನೊಂದಿಗೆ ತನ್ನ ಗಂಡನಿಗೆ ಯಾವುದೇ ಸಂಬಂಧವಿಲ್ಲ. ಅವರ ಜತೆ ತನ್ನ ಗಂಡ ವ್ಯವಹಾರ ನಡೆಸಿಲ್ಲ. ತನ್ನ ಗಂಡನಿಗೆ ತಿಲಕ್‌ರಾಜ್ ಪರಿಚಯ ಮಾತ್ರವೇ ಇದ್ದು, ವಿನಾ ಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಸುಮಾರು ಒಂದೂವರೆ ವರ್ಷದಿಂದ ತನ್ನ ಗಂಡ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಹೆಸರಿನಲ್ಲಿ ಬಡವರ ಸೇವೆ ಮಾಡುತ್ತಿದ್ದಾರೆ. ಅವರು 10 ಲಕ್ಷ ರೂ.ಗಳಷ್ಟು ಹಫ್ತಾ ವಸೂಲಿ ಮಾಡುವವರಾಗಿದ್ದರೆ ಅವರ ಕುಟುಂಬವಿನ್ನೂ ಬಾಡಿಗೆ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಇರುತ್ತಿರಲಿಲ್ಲ. ಸುಳ್ಳು ಆರೋಪ ದಾಖಲಾದ ಬಳಿಕ ಬಂಧನದ ಭಯದಿಂದ ತನ್ನ ಪತಿ ಕಣ್ತಪ್ಪಿಸಿಕೊಂಡಿದ್ದು, ತಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ಜೀವನ ಸಾಗಿಸಲು ತೊಂದರೆಯಾಗಿದೆ ಎಂದು ಅವರು ದು:ಖ ತೋಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೋಡಿಕೆರೆ ಮನೋಜ್ ತಾಯಿ ಭವಾನಿ, ಅಕ್ಕ ಶಶಿಕಲಾ, ತಮ್ಮ ದಯಾನಂದ ಹಾಗೂ ಅವರ ಪತ್ನಿ ಸಂಗೀತಾ ಉಪಸ್ಥಿತರಿದ್ದರು.
Comments are closed.