ಕರಾವಳಿ

ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ : ಇಂದಿನಿಂದ ನೀತಿ ಸಂಹಿತೆ ಜಾರಿ

Pinterest LinkedIn Tumblr

ಮಂಗಳೂರು, ಮಾರ್ಚ್. 27: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಒಟ್ಟು 16,67,194 ಮತದಾರರು ನೋಂದಣಿಯಾಗಿದ್ದು, ಇವರಲ್ಲಿ 8,46,030 ಮಹಿಳೆಯರು ಮತ್ತು 8,21,123 ಪುರುಷ ಮತದಾರರಾಗಿದ್ದಾರೆ. 2013ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 15,01,024 ಮತದಾರರಿದ್ದು, ಈ ಬಾರಿ ಶೇ. 11ರಷ್ಟು ಮತದಾರರ ಸಂಖ್ಯೆ ಹೆಚ್ಚವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಳೆದ ಬಾರಿ ಚುನಾವಣೆಯಲ್ಲಿ 1766 ಮತಗಟ್ಟೆಗಳು ಕಾರ್ಯ ನಿರ್ವಹಿಸಿದ್ದು, ಈ ಬಾರಿ 1858 ಮತಗಟ್ಟೆಗಳನ್ನು ಗುರುತಿಸಲಾಗಿದೆ. (ಇದರಲ್ಲಿ 1790 ಸಾಮಾನ್ಯ ಮತಗಟ್ಟೆಗಳಾಗಿದ್ದು, 68 ಪೂರಕ ಮತಗಟ್ಟೆಗಳಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ 1300ಕ್ಕಿಂತ ಅಧಿಕ ಹಾಗೂ ನಗರ ಪ್ರದೇಶಗಳಲ್ಲಿ 1400ಕ್ಕಿಂತ ಅಧಿಕ ಮತದಾರರನ್ನು ಹೊಂದಿರುವ ಕಡೆ ಈ ಪೂರಕ ಮತಗಟ್ಟೆಗಳನ್ನು ಗುರುತಿಸಲಾಗಿದೆ). ಇದರೊಂದಿಗೆ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಈ ಬಾರಿ ಹಳೆಯ 36 ಮತಗಟ್ಟೆಗಳನ್ನು ಹೊಸತಾಗಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಚುನಾವಣೆಗೆ ಸಂಬಂಧಿಸಿ ದ.ಕ. ಜಿಲ್ಲಾಡಳಿತವು ಪ್ರಥಮ ಹಂತದ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿದೆ. 1858 ಮತಗಟ್ಟೆಗಳಲ್ಲಿ 2787 ಬ್ಯಾಲೆಟ್ ಯುನಿಟ್ ಹಾಗೂ 27 ಕಂಟ್ರೋಲ್ ಯುನಿಟ್‌ಗಳು, 2450 ವಿವಿ ಪ್ಯಾಟ್‌ಗಳನ್ನು ಅಳವಡಿಸಲಾಗಿದೆ. ಈಗಾಗಲೇ ಇಲೆಕ್ಟ್ರಾನಿಕ್ ಮತಯಂತ್ರಗಳು ಆಗಮಿಸಿದ್ದು, ಅವುಗಳ ಪರಿಶೀಲನೆ ನಡೆಸಲಾಗಿದೆ. ವಿವಿ ಪ್ಯಾಟ್ ಮೆಶಿನ್‌ನಿಂದಾಗಿ ಮತದಾರರು ತಾವು ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾಯಿಸಿದ ಮತ ಅರ್ಹ ಅಭ್ಯರ್ಥಿಗೆ ಚಲಾವಣೆಯಾಗಿದೆಯೇ ಎಂಬುದನ್ನು ಪೇಪರ್ ಫಾರ್ಮ್ಯಾಟ್‌ನಲ್ಲಿ ಪರಿಶೀಲಿಸುವ ತಂತ್ರವಾಗಿದೆ.

ಪ್ರತಿಯೊಂದು ಮತಗಟ್ಟೆಯಲ್ಲಿಯೂ ಈ ವಿವಿ ಪ್ಯಾಟ್ ಯಂತ್ರವನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಮತದಾನದಲ್ಲಿ ಯಾವುದೇ ರೀತಿಯ ತೊಂದರೆ, ಅಕ್ರಮಗಳಾಗಲು ಸಾಧ್ಯವಾಗುವುದಿಲ್ಲ. ಮತದಾರರು ಮತ ಚಲಾವಣೆಯ ತಕ್ಷಣ ವಿವಿ ಪ್ಯಾಟ್‌ನ್ನು ಪರಿಶೀಲಿಸಿ ಆಕ್ಷೇಪಣೆಗಳಿದ್ದಲ್ಲಿ ಮತಗಟ್ಟೆಯ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬಹುದು. ಪ್ರತಿಯೊಂದು ಕ್ಷೇತ್ರದಲ್ಲೂ ಒಂದು ಮಹಿಳಾ ಮತಗಟ್ಟೆಗಳಿರುತ್ತದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

24 ಗಂಟೆಗಳಲ್ಲಿ ಸರಕಾರಿ ಆಸ್ತಿಗಳಲ್ಲಿನ ಜಾಹೀರಾತು ತೆರವು !

ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಸರಕಾರಿ ಆಸ್ತಿಗಳಲ್ಲಿ ಹಾಕಲಾಗಿರುವ ಅನಧಿಕೃತ ಜಾಹೀರಾತುಗಳನ್ನು 24 ಗಂಟೆಯೊಳಗೆ, ಸಾರ್ವಜನಿಕ ಪ್ರದೇಶಗಳಲ್ಲಿ 48 ಗಂಟೆಯೊಳಗೆ ಹಾಗೂ ಇತರ ಅನಧಿಕೃತ ಜಾಹೀರಾತುಗಳನ್ನು ಮೂರ್ನಾಲು ದಿನಗಳಲ್ಲಿ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

ಚುನಾವಣಾ ಕಂಟ್ರೋಲ್ ರೂಂ ಸಂಖ್ಯೆ
ಚುನಾವಣೆಗೆ ಸಂಬಂಧಿಸಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ನಂಬರ್ 1800 4252099 ಅಥವಾ 0824 2420002.

++ವಾಭಾ

Comments are closed.