ಕರಾವಳಿ

ಸ್ವಚ್ಛತೆಯ ಸಂದೇಶವನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಿದ ಮದ್ರಸ‌ ಅದ್ಯಾಪಕರು

Pinterest LinkedIn Tumblr

ಫರಂಗಿಪೇಟೆ, ಮಾರ್ಚ್. 27: ಇಸ್ಲಾಂ ಸ್ವಚ್ಛತೆಗೆ ಬಹಳಷ್ಟು ಮಹತ್ವವನ್ನು ಕೊಟ್ಟಿದೆ. ಸ್ವಚ್ಛತೆಯು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ ಎಂದು ಪ್ರವಾದಿ ಮುಹಮ್ಮದ್ (ಸ.ಅ) ಸಾರಿದ್ದಾರೆ. ಇದೇ ಸಂದೇಶವನ್ನು ಮದ್ರಸಗಳಲ್ಲಿ ಕಲಿಸಲಾಗುತ್ತಿದೆ. ಮದ್ರಸಗಳಲ್ಲಿ ತಾವು ಮಕ್ಕಳಿಗೆ ಕಲಿಸುವ ಸ್ವಚ್ಛತೆಯ ವಿಷಯವನ್ನು ಮದ್ರಸ ಅಧ್ಯಾಪಕರು ಕಾರ್ಯರೂಪದಲ್ಲಿ ಮಾಡಿತೋರಿಸಿದ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು.

ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್ ಇವರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮವು ಇಂದು ಪೂರ್ವಾಹ್ನ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು.

ರಾಷ್ಟ್ರೀಯ ಹೆದ್ದಾರಿ 75 ಸಾಗುವ ಫರಂಗಿಪೇಟೆ ಜಂಕ್ಷನ್‌ಗೆ ಸಮೀಪದಲ್ಲೇ ದಾರಿಹೋಕರು, ಬೈಕ್, ಕಾರುಗಳಲ್ಲಿ ಸಂಚರಿಸುವವರು ತಮ್ಮ ಮನೆಯ ತ್ಯಾಜ್ಯದ ಕಟ್ಟುಗಳನ್ನು ಮಾರ್ಗದ ಬದಿಯಲ್ಲೇ ಎಸೆಯುವುದು ಸಾಮಾನ್ಯವಾಗಿದೆ. ಈ ಸ್ಥಳದಲ್ಲಿ ಪಂಚಾಯತ್ ವತಿಯಿಂದ ಕಸ ಎಸೆಯಬಾರದು ಎಂಬ ಸೂಚನಾ ಫಲಕವಿದ್ದರೂ ಕಸ ಎಸೆಯುವುದು ಮಾಮೂಲಾಗಿದೆ.

ಬಹಳಷ್ಟು ಕಸದ ರಾಶಿಯಿಂದ ತುಂಬಿದ್ದ ಜಾಗದಲ್ಲಿ ಮದ್ರಸ ಅಧ್ಯಾಪಕರು ಯಾವುದೇ ಅಸಹ್ಯ ಪಡೆದೆ ಸ್ವಚ್ಛತಾ ಕಾರ್ಯಕ್ಕೆ ಇಳಿದರು. ಮನೆಮನೆಗಳಿಂದ ಎಸೆದಿದ್ದ ತ್ಯಾಜ್ಯದ ತೊಟ್ಟೆಗಳನ್ನು ಹೆಕ್ಕಿ ಬುಟ್ಟಿಗೆ ತುಂಬಿಸಿ ಲಾರಿಗೆ ಲೋಡು ಮಾಡಿದರು.

ದುರ್ನಾತ ಬೀರುತ್ತಿದ್ದ ಕಟ್ಟುಗಳನ್ನು ಹೆಕ್ಕುವಾಗಲು ಸಹ ಒಂದಿಷ್ಟು ಅಸಹ್ಯ ಪಡದೆ ತುಂಬಾ ಉತ್ಸುಕತೆಯಿಂದ ಭಾಗವಹಿಸುತ್ತಿರುವುದು ಕಂಡು ಬಂತು. ಪ್ರವಾದಿವರ್ಯರು ಏನು ಹೇಳಿದ್ದಾರೆ ಎಂದು ಭಾಷಣ ಮಾಡಲು ಮಾತ್ರ ನಾವು ಸೀಮಿತವಲ್ಲ. ನಾವು ಅವನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಲು ಸಿದ್ಧ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮದ್ರಸ ಅಧ್ಯಾಪಕರ ಪರಿಸರ ಕಾಳಜಿ ಮತ್ತು ಸೇವಾ ಮನೋಭಾವವನ್ನು ನಾವು ಪ್ರಶಂಸಿಸಲೇಬೇಕು ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್ ಅಧ್ಯಕ್ಷ ಅಬ್ದುಲ್ ರಶೀದ್ ಹನೀಫಿ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫೈಝಿ ಮಾರಿಪಳ್ಳ, ಪರೀಕ್ಷಾ ಬೋರ್ಡು ಚಯರ್ ಮ್ಯಾನ್ ಶರೀಫ್ ದಾರಿಮಿ, ಉಪಾಧ್ಯಕ್ಷರುಗಳಾದ ಜಲೀಲ್ ದಾರಿಮಿ, ಶಂಶುದ್ದೀನ್ ಯಮಾನಿ, ಸದಸ್ಯರುಗಳಾದ ಅಶ್ರಫ್ ಅಝ್ಹರಿ ಬೋರುಗುಡ್ಡೆ, ಸ್ವಾದಿಖ್ ಹನೀಫಿ ಕುಂಬ್ರ, ತಸ್ಲೀಮ್ ಅರ್ಷದಿ, ಅಬ್ದುಲ್ಲಾ ದಾರಿಮಿ ಮಲ್ಲಿ, ಸಿದ್ದೀಖ್ ಹನೀಫಿ ಮಂಚಿ, ಮುಅತ್ತಿಬ್ ಅರ್ಷದಿ, ಅಬ್ದುಲ್ ಖಾದರ್ ಮದನಿ, ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ಬಳ್ಳೂರುಗುಡ್ಡೆ, ಮುಹಮ್ಮದ್ ಅಶ್ರಫ್ ಮೌಲವಿ ಬಳ್ಳೂರುಗುಡ್ಡೆ, ಅಬ್ದುಲ್ ರಝಾಕ್ ದಾರಿಮಿ ವಳಚ್ಚಿಲ್‌ಪದವು, ಅಬೂಬಕರ್ ಸಿದ್ದೀಖ್ ಅನ್ಸಾರಿ, ಅಬ್ದುಲ್ ರಶೀದ್ ಅಝ್ಹರಿ, ಅಬ್ದುಲ್ಲ ಮುಸ್ಲಿಯಾರ್ , ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು, ಸಲಹೆಗಾರ ರಫೀಕ್ ಮಾಸ್ಟರ್, ಸದಸ್ಯರಾದ ಅಸ್ಪರ್ ಹುಸೈನ್, ಅಸ್ಲಂ ಗೂಡಿನಬಳಿ, ನಕಾಶ್ ಬಾಂಬಿಲ ಮೊದಲಾದವರು ಭಾಗವಹಿಸಿದ್ದರು.

ಪುದು ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ  :

ಪುದು ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿದ ನೂತನ ಅಧ್ಯಕ್ಷ ರಮ್ಲಾನ್ ಅವರ ತಂಡ ಪರಿಸರ ಮಾಲಿನ್ಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಅಧ್ಯಕ್ಷರು ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ, ತ್ಯಾಜ್ಯ ನಿರ್ವಹಣೆಗೆ ಪಂಚಾಯತ್ ವತಿಯಿಂದ ಮುಂದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ನಿಷೇಧಿತ ಜಾಗದಲ್ಲಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಭರವಸೆ ಇತ್ತರು.

ಅವರೊಂದಿಗೆ ಪಂಚಾಯತ್ ಪಿ.ಡಿ.ಒ ಪ್ರೇಮಲತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕೆ.ಪಿ.ಸಿ.ಸಿ ಚುನಾವಣಾ ಪ್ರಚಾರ ಸಮಿತಿ ಸದಸ್ಯ ಉಮರ್ ಫಾರೂಖ್, ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್, ಸಲಾಂ ಮತ್ತು ಸ್ವಚ್ಛತಾ ಸಿಬಂದಿ ಮುಹಮ್ಮದ್ ಕೈಸ್ ಉಪಸ್ಥಿತರಿದ್ದರು.

Comments are closed.