ಕರಾವಳಿ

ಗ್ರಾಮೀಣ ಪ್ರದೇಶದಲ್ಲಿ ಕಲಾವಿದರನ್ನು ಸೃಷ್ಠಿಸಿದ ಕೀರ್ತಿ ಶಾಂತಾರಾಮ ಕಲ್ಲಡ್ಕರವರದು : ಬಿ. ಕೆ ರಾಜ್ ನಂದಾವರ

Pinterest LinkedIn Tumblr

ಮಂಗಳೂರು ಮಾರ್ಚ್ 27 : ಗ್ರಾಮೀಣ ಪ್ರದೇಶದಲ್ಲಿ ಕಲಾವಿದರನ್ನು ಸೃಷ್ಠಿಸಿ ಅವರನ್ನು ರಂಗ ಚಟುವಟಿಕೆಗೆ ತೊಡಗಿಸಿಕೊಳ್ಳುವ ಮೂಲಕ ತುಳು ರಂಗಭೂಮಿಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡವರು ದಿ. ಶಾಂತಾರಾಮ ಕಲ್ಲಡ್ಕ ಎಂದು ಹಿರಿಯ ರಂಗಕಲಾವಿದ, ಧಾರ್ಮಿಕ ಮುಖಂಡ ಬಿ. ಕೆ ರಾಜ್ ನಂದಾವರ ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿವತಿಯಿಂದ ಮಹಾನಗರಪಾಲಿಕೆ ಸಹಕಾರದೊಂದಿಗೆ ನಗರದ ಪುರಭವನದಲ್ಲಿ ಜರಗಿದ ತುಳು ನಾಟಕ ಪರ್ಬ – 2018 ರ 3ನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ರಂಗಚೇತನ ದಿ. ಶಾಂತಾರಾಮ ಕಲ್ಲಡ್ಕರವರಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ದಿ. ಶಾಂತಾರಾಮ ಕಲ್ಲಡ್ಕರವರು ಪ್ರಾರಂಭದಲ್ಲಿ ಚಿತ್ರಕಲಾವಿದರಾಗಿ ಮಣ್ಣಿನ ಮೂರ್ತಿ ಶಿಲ್ಪ ರಚನೆಕಾರರಾಗಿ ವೃತ್ತಿ ಜೀವನ ಆರಂಭಿಸಿದರು. ಬಾಲ್ಯದಲ್ಲಿಯೇ ನಾಟಕ ಕಲಾವಿದರಾಗಿ ಗುರುತಿಸಿಕೊಂಡು ಬಳಿಕ 60ಕ್ಕೂ ಹೆಚ್ಚು ನಾಟಕ ರಚನೆ ಮಾಡಿ, ನಿರ್ದೇಶನ, ಗೀತೆರಚನೆ, ಹಿನ್ನೆಲೆಗಾಯಕರಾಗಿ, ಪ್ರಸಾಧನ ಕಲಾವಿದರಾಗಿ, ಪರದೆ ಹಾಗೂ ಸೆಟ್ಟಿಂಗ್ ನಿರ್ವಾಹಕರಾಗಿ ತುಳು ರಂಗಭೂಮಿಯ ಸವ್ಯಸಾಚಿಯಾಗಿ ಮೆರೆದರು. ಹಳ್ಳಿ ಹಳ್ಳಿಗಳಲ್ಲಿ ಸಾವಿರಾರು ಯುವಕರಿಗೆ ನಾಟಕದ ಗುರುಗಳಾಗಿ ಗುರುತಿಸಿಕೊಂಡರೂ ಜೀವನದ ಕೊನೆಯವರೆಗೂ ಬಡತನದಲ್ಲಿಯೇ ಜೀವನ ಸಾಗಿಸಿದರು.

80ರ ದಶಕದಲ್ಲಿ ಸುರಿಬೈಲು ಎಂಬಲ್ಲಿ ಅವರದೇ ಒಂದು ನಾಟಕ ಪ್ರದರ್ಶನ ಸಂದರ್ಭದಲ್ಲಿ ರಾತ್ರಿ 3 ಗಂಟೆಗೆ ನಾಟಕ ಮುಗಿಯಿತು. ಮಧ್ಯರಾತ್ರಿ ನಂತರ ಪ್ರೇಕ್ಷಕರಿಗೆ ತಮ್ಮ ಊರಿಗೆ ಹೋಗಲು ಅಸಾಧ್ಯವೆಂದು ಕಂಡುಕೊಂಡ ಸ್ಥಳದಲ್ಲಿಯೇ ಹೊಸ ನಾಟಕ ಬರೆದು ಲಭ್ಯ ಕಲಾವಿದರನ್ನು ಉಪಯೋಗಿಸಿ ರಾತ್ರಿ 3 ಗಂಟೆಯಿಂದ ಬೆಳಿಗ್ಗೆ 6 ಗಂಟೆಗೆ ಮತ್ತೊಂದು ನಾಟಕ ಪ್ರದರ್ಶಿಸಿದವರು ಎಂದು ಬಿ. ಕೆ. ರಾಜ್ ಅವರು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಮಹಾನಗರಪಾಲಿಕೆ ಮೇಯರ್ ಕೆ. ಭಾಸ್ಕರ್, ಸದಸ್ಯರಾದ ಅಪ್ಪಿ, ಲ್ಯಾನ್ಸ್‍ಲೇಟ್ ಪಿಂಟೋ, ಮಾಜಿ ಮೇಯರ್ ಹರಿನಾಥ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ರಂಗಕಲಾವಿದ ಬಿ. ಆರ್. ಕುಲಾಲ್ ದೀಪ ಪ್ರಜ್ವಲನೆ ಮಾಡಿ ಪುಷ್ಪಾರನೆ ನೇರವೇರಿಸಿದರು. ದಿ. ಶಾಂತಾರಾಮ ಕಲ್ಲಡ್ಕ ಅವರ ಪತ್ನಿ ಜಯಂತಿ, ಮಕ್ಕಳಾದ ಭವ್ಯಶ್ರೀ, ದಿವ್ಯಶ್ರೀ, ಸವ್ಯರಾಜ್ ನವ್ಯರಾಜ್, ಸಹೋದರ ರಮೇಶ್ ಕಲ್ಲಡ್ಕ, ಭಾಗವಹಿಸಿದರು. ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಅತಿಥಿಗಳನ್ನು ಗೌರವಿಸಿದರು.

ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ, ಡಾ. ವಾಸುದೇವ ಬೆಳ್ಳೆ, ತಾರನಾಥ ಗಟ್ಟಿ ಕಾಪಿಕಾಡ್, ಬೆನೆಟ್ ಅಮ್ಮಣ್ಣ, ವಿದ್ಯಾಶ್ರೀ ಎಸ್, ಸುಧಾನಾಗೇಶ್, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಉಪಸ್ಥಿತರಿದ್ದರು.

ಬಳಿಕ ದಿ. ಶಾಂತಾರಾಮ ಕಲ್ಲಡ್ಕರವರ ಕುಂಕುಮ ನಾಟಕವನ್ನು ರಮಾ ಬಿ. ಸಿ. ರೋಡ್ ನಿರ್ದೇಶನದಲ್ಲಿ ತುಳುವಪ್ಪೆ ಜೋಕುಲು ಕಲ್ಲಡ್ಕ ತಂಡದ ಕಲಾವಿದರು ರಂಗದಲ್ಲಿ ಪ್ರದರ್ಶಿಸಿದರು.

Comments are closed.