ಉಡುಪಿ: ಸ್ನೇಹಿತರು ಸೇರಿ ಪಾರ್ಟಿ ಮುಗಿಸಿ ಊಟಕ್ಕೆಂದು ಬಂದ ವೇಳೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಜೊತೆಯಾಗಿದ್ದವರು ಸೇರಿ ಓರ್ವನಿಗೆ ಹೊಡೆದ ಪರಿಣಾಮ ಆತ ಕುಸಿದುಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪದ ಪಡುಕೆರೆಯ ಸರ್ಕಲ್ ಬಳಿ ನಡೆದಿದೆ.

ಸಂತೋಷ್ ಮೊಗವೀರ(31) ಮೃತ ಯುವಕ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್(21), ಕೌಶಿಕ್(21), ಅಂಕಿತ(19), ಸುಜನ್(21) ಎನ್ನುವರನ್ನು ಬಂಧಿಸಲಾಗಿದೆ.
ಘಟನೆ ವಿವರ: ಡಿ. 14 ರಂದು ಸಂಜೆ ವೇಳೆಗೆ ಮೃತ ಸಂತೋಷ್ ಹಾಗೂ ಸ್ನೇಹಿತರು ಪಾರ್ಟಿಗೆ ಸೇರಿದ್ದು ಅಲ್ಲಿಂದ ಮುಗಿಸಿ ಪಡುಕೆರೆಯ ಸರ್ಕಲ್‌ಗೆ ಬಂದ ಅವರು ಊಟ ಮಾಡಿ ಮಾತನಾಡುತ್ತಿರುವಾಗ, ದರ್ಶನ್ ಮತ್ತು ಕೌಶಿಕ್, ಅಂಕಿತ ಹಾಗೂ ಸುಜನ್ ಎನ್ನುವರು ಸಂತೋಷನ ಕುಟುಂಬದ ವಿಚಾರದಲ್ಲಿ ಮತ್ತು ಕುಡಿಯುವ ವಿಚಾರದಲ್ಲಿ ಮಾತನಾಡಿ ಅವಾಚ್ಯವಾಗಿ ಜಗಳ ಮಾಡಿ ಸಂತೋಷನಿಗೆ ನಾಲ್ಕು ಜನರು ಸೇರಿ ಹೊಡೆದಿದ್ದಲ್ಲದೆ ಪರಸ್ಪರ ದೂಡಾಡಿಕೊಂಡಿದ್ದಾರೆ. ಅವರುಗಳು ಹೊಡೆದಿರುವುದರಿಂದ ಸಂತೋಷ್ ಅಲ್ಲಿಯೇ ಕುಸಿದು ಬಿದ್ದಿದ್ದು, ದೂರುದಾರ ಜಗಳ ತಪ್ಪಿಸಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಹೊರಟು ಹೋಗಿದ್ದು ಸಂತೋಷ್ ತೀವೃ ಅಸ್ವಸ್ಥಗೊಂಡು ಬಿದ್ದಿದ್ದು ದೂರುದಾರರು ಸಮೀಪದವರನ್ನು ಕರೆಸಿ ಸಂತೋಷನನ್ನು ಕಾರಿನಲ್ಲಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಸಂತೋಷ್ ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸಂತೋಷ ಅವವರಿಗೆ ದರ್ಶನ್, ಕೌಶಿಕ್, ಅಂಕಿತ ಮತ್ತು ಸುಜನ್ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತಿಕವಾಗಿ ಹೊಡೆದು ಕೊಲೆ ಮಾಡಿದ್ದಾಗಿ ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತ ಸಂತೋಷ್ ಬಡತನದ ಕುಟುಂಬದವರಾಗಿದ್ದು ಖಾಸಗಿ ಬ್ಯಾಂಕ್‌ನಲ್ಲಿ ಕೆಲಸಕ್ಕಿದ್ದರು. ಆರೋಪಿಗಳು ಕೂಡ ಸಂತೋಷ್ ಮನೆಯ ಆಸುಪಾಸಿನವರೇ ಆಗಿದ್ದಾರೆಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಹರಿರಾಂ ಶಂಕರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಟಿ. ಹಾಗೂ ಠಾಣಾ ಎಸ್ಸೆ ಮಾಂತೇಶ್ ಜಾಭಗೌಡ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆಸಿದ್ದಾರೆ.
Comments are closed.