ಕರಾವಳಿ

ರಾಜ್ಯದಲ್ಲಿ ಎಲ್ಲರಿಗೂ ಎಲ್‌ಪಿಜಿ ಸಂಪರ್ಕ, ಶೀಘ್ರದಲ್ಲೇ ಕರ್ನಾಟಕ ಹೊಗೆ ಮುಕ್ತವಾಗಲಿದೆ :ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Pinterest LinkedIn Tumblr

ಮಂಗಳೂರು, ಮಾರ್ಚ್ 25: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸು ಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸದ ಬಳಿಕ ಬಿಜೆಪಿ ಮತ್ತಷ್ಟು ಚುರುಕುಗೊಂಡಿದೆ. ಕೇಸರಿ ಪಕ್ಷದ ನಾಯಕರು ಒಬ್ಬರ ಹಿಂದೆ ಒಬ್ಬರಂತೆ ಜಿಲ್ಲೆಗೆ ಭೇಟಿ ನೀಡಿ, ಕಾರ್ಯಕರ್ತರನ್ನು ಉತ್ತೇಜಿಸುತ್ತಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ, ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಬೆಳ್ತಂಗಡಿ, ಸುಳ್ಯ ಸೇರಿದಂತೆ ಇನ್ನಿತರ ಭಾಗಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಧಾನ್, ಭಾನುವಾರ ಮಂಗಳೂರಿಗೆ ಭೇಟಿ ನೀಡಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಮುಂದಿನ ಕೆಲವು ತಿಂಗಳ ಒಳಗೆ ಕರ್ನಾಟಕ ರಾಜ್ಯ ಶೇ 100 ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಹೊಂದಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ 2014ರ ಬಳಿಕ ಹೆಚ್ಚುವರಿಯಾಗಿ ಶೇ 31ಎಲ್‌ಪಿಜಿ ಸಂಪರ್ಕವನ್ನು ಕುಟುಂಬಗಳಿಗೆ ನೀಡಲಾಗಿದೆ.ಕರ್ನಾಟಕದಲ್ಲಿ ಪ್ರಸಕ್ತ 81ಲಕ್ಷ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಇದೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

7000 ಕೋಟಿ ರೂ ವೆಚ್ಚದಲ್ಲಿ ಎಂಆರ್‌ಪಿಎಲ್ ವಿಸ್ತರಣೆ ಯೋಜನೆ:- ಮುಂದಿನ ಐದು ವರ್ಷದಲ್ಲಿ ಸುಮಾರು 7000 ಕೋಟಿ ರೂ ವೆಚ್ಚದಲ್ಲಿ ಎಂಆರ್‌ಪಿಎಲ್ ವಿಸ್ತರಣೆ ಯೋಜನೆ ಕಾರ್ಯಗತಗೊಳ್ಳಲಿದೆ .ಪ್ರಸಕ್ತ 15 ಮಿಲಿಯನ್ ಮೆಟ್ರಿಕ್‌ಟನ್ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದ್ದು ಮುಂದಿನ ಹಂತದಲ್ಲಿ 25 ಮಿಲಿಯನ್ ಮೆಟ್ರಿಕ್‌ಟನ್ ಸಂಸ್ಕರಣಾ ಸಾಮರ್ಥ್ಯವನ್ನು ವೃದ್ಧಿಸುವ ಗುರಿ ಹೊಂದಲಾಗಿದೆ. ಭೂ ಸ್ವಾಧೀನ ಪ್ರಕ್ರೆಯೆ ನಡೆಯುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಮಂಗಳೂರು ಆರ್ಥಿಕ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. 2018ರೊಳಗೆ ಕೊಚ್ಚಿಯಿಂದ ಮಂಗಳೂರಿಗೆ ಗ್ಯಾಸ್ ಸಂಪರ್ಕ ಕಾರ್ಯ ಪೂರ್ಣಗೊಳ್ಳಲಿದೆ. ಕರ್ನಾಟಕ ಕೆಲವು ತಿಂಗಳಲ್ಲಿ ಹೊಗೆ ಮುಕ್ತವಾಗಲಿದೆ. ನಮ್ಮ ಸರಕಾರ ಯೋಜನೆ ಮೂಲಕ ಹೊಗೆ ಮುಕ್ತ ಕರ್ನಾಟಕ ನಿರ್ಮಿಸಲಿದೆ. ಎಲ್ಲ ಜನರು ಎಲ್ ಪಿಜಿ ಬಳಕೆ ಮಾಡುವುದರೊಂದಿಗೆ ರಾಜ್ಯವು ಹೊಗೆ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರ ಅಭಿವೃದ್ಧಿ ಬಗ್ಗೆ ಆಲೋಚಿಸಿಲ್ಲ. ಸಮಾಜವನ್ನು ವಿಭಜಿಸುವ ಕೆಲಸ ಮಾತ್ರ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಕಿಡಿ ಕಾರಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿವೃದ್ಧಿಯ ‌ದೂರದೃಷ್ಟಿ ಹೊಂದಿದ್ದು, ಅದೇ ಮುಂಬರುವ ಚುನಾವಣೆಯ ಅಜೆಂಡಾ ಎಂದು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಜನರು ‌ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಯಲ್ಲಿ ತರಬೇಕೆಂದು ನನ್ನ ಬಲವಾದ ಆಗ್ರಹ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ಬಗ್ಗೆ ಜಿಎಸ್ ಟಿ ಸಮಿತಿಗೆ ಮನವರಿಕೆ ‌ಮಾಡುತ್ತಿದ್ದೇನೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರುವುದರಿಂದ ಗ್ರಾಹಕರಿಗೆ ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಭಾರಿ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು. ಎಂಆರ್ ಪಿಎಲ್ ನಿಂದ ಪರಿಸರ ಮಾಲಿನ್ಯ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಂಆರ್ ಪಿಎಲ್ ಪರಿಸರಸ್ನೇಹಿ ಕೈಗಾರಿಕೆ. ಅದು ಹಾಗೂ ಓಎಂಪಿಎಲ್ ವಿಲೀನ ಪ್ರಕ್ರಿಯೆ ಅಂತಿಮ‌ ಹಂತದಲ್ಲಿದೆ. ಅದಕ್ಕಾಗಿ ಭೂ ಸ್ವಾಧೀನ ಪ್ರಕ್ರೀಯೆ ಹಂತದಲ್ಲಿದೆ. ಇದರ ಸಂಪೂರ್ಣ ವಿಸ್ತರಣೆ ಕಾರ್ಯ ನಡೆದ ನಂತರ ಸಮುದ್ರ ನೀರು ಬಳಕೆ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಹಾರಾಷ್ಟ ಸರಕಾರದ ಸಂಸದ ಗೋಪಾಲ ಶೆಟ್ಟಿ,ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು, ಮಾಜಿ ಶಾಸಕ ಮೋನಪ್ಪ ಭಂಡಾರಿ,ಶಾಸಕ ಗಣೇಶ್ ಕಾರ್ನಿಕ್, ಮಾಜಿ ಶಾಸಕ ಯೋಗೀಶ್ ಭಟ್ ,ಬಿಜೆಪಿ ಮುಖಂಡರಾದ ಉಮನಾಥ್ ಕೋಟ್ಯಾನ್,ಬ್ರಿಜೇಶ್ ಚೌಟ ಮೊದಲಾದವರು ಉಪಸ್ಥಿತರಿದ್ದರು.

Comments are closed.