ಕರಾವಳಿ

ಅನ್ಯಕೋಮಿನ ವಿದ್ಯಾರ್ಥಿನಿಯರ ಜೊತೆ ತಣ್ಣೀರುಬಾವಿ ಬೀಚ್‌ಗೆ ತೆರಳಿದ್ದ ಯುವಕರ ಮೇಲೆ ಹಲ್ಲೆ : ಮೂವರ ಬಂಧನ

Pinterest LinkedIn Tumblr

ಮಂಗಳೂರು, ಮಾರ್ಚ್. 25: ಹುಟ್ಟು ಹಬ್ಬ ಆಚರಿಸಲು ಅನ್ಯ ಕೋಮಿನ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ತೆರಳಿದ ಮೂವರು ಯುವಕರಿಗೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ ಘಟನೆ ನಗರದ ತಣ್ಣಿರು ಬಾವಿ ಬೀಚ್ ಸಮೀಪದ ಚರ್ಚ್ ಬಳಿ ಶನಿವಾರ ಸಂಜೆ ನಡೆದಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ವಿಟ್ಲ ಸಮೀಪದ ಸಾಬಿತ್ ಮತ್ತು ಬಿ.ಸಿ.ರೋಡ್ ಸಮೀಪದ ಸಮೀರ್ ಎಂದು ಗುರುತಿಸಲಾಗಿದೆ. ಹಲ್ಲೆಗೈದ ದುಷ್ಕರ್ಮಿಗಳನ್ನು ಸ್ಥಳೀಯರಾದ ಸುಕೇಶ್, ವರುಣ್ ಮತ್ತು ದೀಕ್ಷಿತ್ ಎಂದು ಹೆಸರಿಸಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಗರದ ಬೋಳೂರು ಸಮೀಪದ ಸುಲ್ತಾನ್ ಬತ್ತೇರಿಯಿಂದ ತಣ್ಣೀರು ಬಾವಿ ಬೀಚ್‌ಗೆ ತೆರಳುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ವೀಟಿ ಎಂಬ ವಿದ್ಯಾರ್ಥಿನಿಯ ಹುಟ್ಟುಹಬ್ಬ ಆಚರಿಸಲು ಸಾಬಿತ್,ಸಮೀರ್,ನಿತೇಶ್ ಹಾಗೂ ರೋಶ್ನಿ ಎಂಬ ಐವರು ವಿದ್ಯಾರ್ಥಿಗಳು ಬೀಚ್ ಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.

ಶನಿವಾರ ಸಂಜೆ ಸುಮಾರು 5 ಗಂಟೆಗೆ ಮೂವರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರ ಸಹಿತ ಐವರು ತಣ್ಣಿರು ಬಾವಿ ಬೀಚ್ ಸಮೀಪ ವಿಹರಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಐದಾರು ಮಂದಿಯ ತಂಡವೊಂದು ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದೆಯಲ್ಲದೆ ಹೆಸರು ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳು ತಮ್ಮ ಹೆಸರು ಹೇಳುತ್ತಿದ್ದಂತೆಯೇ ದುಷ್ಕರ್ಮಿಗಳು ಯದ್ವಾತದ್ವಾ ಹಲ್ಲೆ ನಡೆಸಿದರಲ್ಲದೆ ಸಮೀರ್ ಎಂಬಾತನ ಮೊಬೈಲ್ ಕಿತ್ತುಕೊಂಡಿದೆ. ಬಳಿಕ ಮೊಬೈಲ್ ಕೊಡಲು ಸತಾಯಿಸಿ, ‘ನಮಗೆ ಇದನ್ನು ಪರಿಶೀಲಿಸಬೇಕಿದೆ. ನಾಳೆ ಕರೆ ಮಾಡಿ’ ಎಂದು ಮೊಬೈಲ್ ಸಂಖ್ಯೆಯೊಂದನ್ನು ನೀಡಿ ಕಿತ್ತುಕೊಂಡ ಮೊಬೈಲ್‌ನೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ.

ಘಟನೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಾಬಿತ್, ‘ನಾವು ಐದು ಮಂದಿ ಸಂಜೆ 5 ಗಂಟೆಗೆ ಸುಲ್ತಾನ್ ಬತ್ತೇರಿಯಲ್ಲಿ ಕುಳಿತಿದ್ದಾಗ ಅಲ್ಲೇ ಪಾನಮತ್ತರಾಗಿದ್ದ ಐದಾರು ಮಂದಿ ನಮ್ಮ ಬಳಿ ಬಂದು ನೀವು ಬ್ಯಾರಿಗಳಾ ಎಂದು ಕೇಳಿದ್ದಾರೆ. ಬಳಿಕ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.  ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರ ಬಂಧನ :

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ತಣ್ಣೀರು ಬಾವಿ ನಿವಾಸಿಗಳಾದ ವರುಣ್ ಸುವರ್ಣ, ದೀಕ್ಷಿತ್ ಪುತ್ರನ್ ಹಾಗೂ ಬೈಕಂಪಾಡಿಯ ಸುಕೇಶ್ ಪುತ್ರನ್ ಎಂದು ಗುರುತಿಸಲಾಗಿದೆ.

Comments are closed.