ಕರಾವಳಿ

ವೆನ್‍ಲಾಕ್‍ನಲ್ಲಿ ಐಸಿಯು ಸಾಮಾರ್ಥ್ಯ ಹೆಚ್ಚಿಸಲು ಸರಕಾರಕ್ಕೆ ಕೆಡಿಪಿ ಸಭೆಯಲ್ಲಿ ಒತ್ತಾಯ

Pinterest LinkedIn Tumblr

ಮಂಗಳೂರು ಮಾರ್ಚ್ 24 : ಜಿಲ್ಲಾಸ್ಪತ್ರೆ ವೆನ್‍ಲಾಕ್‍ನಲ್ಲಿ ಐಸಿಯು ತುರ್ತು ಚಿಕಿತ್ಸಾ ಘಟಕದಲ್ಲಿ (ತೀವ್ರ ನಿಗಾ ಘಟಕ) ಬೇಡಿಕೆಗೆ ತಕ್ಕಂತೆ ಹಾಸಿಗೆ ಲಭ್ಯವಿಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಐಸಿಯು ಹಾಸಿಗೆ ಸಾಮಾರ್ಥ್ಯ ಹೆಚ್ಚಿಸುವಂತೆ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಗಿದೆ.

ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಭೆಯಲ್ಲಿ ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು. .

ವಿಷಯ ಪ್ರಸ್ತಾಪಿಸಿದ ಜಿ.ಪಂ. ಅಧ್ಯಕ್ಷರು, ವೆನ್‍ಲಾಕ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಲು ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳ ಕೊರತೆಯಿದೆ. ಈ ಘಟಕ ಸದಾ ರೋಗಿಗಳಿಂದ ಸಾಮಥ್ರ್ಯ ತುಂಬಿದ್ದು, ತುರ್ತು ಸಂದಭ್ದಲ್ಲಿ ರೋಗಿಗಳಿಗೆ ಐಸಿಯುನಲ್ಲಿ ದಾಖಲಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದೆ. ಐಸಿಯು ಹಾಸಿಗೆಗಳ ಕೊರತೆಯಿಂದ ಜನಪ್ರತಿನಿಧಿಗಳು ಸೂಚಿಸಿದರೂ, ಚಿಕಿತ್ಸೆ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಇದರಿಂದ ಇಂತಹ ರೋಗಿಗಳಿಗೆ ಜನರಲ್ ವಾರ್ಡ್‍ನಲ್ಲಿ ಇಡಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೆನ್‍ಲಾಕ್ ಅಧಿಕಾರಿಗಳು, ವೆನ್‍ಲಾಕ್ ಆಸ್ಪತ್ರೆಯಲ್ಲಿ ಈ ಹಿಂದೆ 7 ಐಸಿಯು ಬೆಡ್‍ಗಳಿದ್ದು, ಅದನ್ನು 12 ಕ್ಕೆ ಹೆಚ್ಚಿಸಲಾಗಿದೆ. ಆದರೂ ಹೊರರಾಜ್ಯಗಳಿಂದ, ಹೊರ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯ ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ಬೇರೆಡೆ ತುರ್ತು ಸ್ಥಿತಿಯಲ್ಲಿರುವ ರೋಗಿಗಳನ್ನೂ ಇಲ್ಲಿಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿ ಸ್ಥಳದ ಕೊರತೆ ಇದೆ. ಆದರೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ರೋಗಿಗಳ ಹಿತದೃಷ್ಠಿಯಿಂದ ವೆನ್‍ಲಾಕ್ ಆಸ್ಪತ್ರೆಯಲ್ಲಿ ಐಸಿಯು ಘಟಕದ ಸಾಮಥ್ರ್ಯವನ್ನು ಹೆಚ್ಚಿಸುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ಜಿಲ್ಲಾಸ್ಪತ್ರೆಯಲ್ಲಿನ ಸಿಬ್ಬಂದಿಗಳು ರೋಗಿಗಳ ಜೊತೆ ಉತ್ತಮ ರೀತಿಯಲ್ಲಿ ವರ್ತಿಸಲು ಕ್ರಮ ವಹಿಸಲು ಸೂಚಿಸಿದರು.

ಹಾಗೂ ಈ ಹಿಂದೆ ವೆನ್‍ಲಾಕ್ ಆಸ್ಪತ್ರೆಯ ಶ್ರದ್ಧಾಂಜಲಿ ವಾಹನಕ್ಕೆ ವಾಹನ ಚಾಲಕರ ಕೊರತೆ ಇದ್ದುದರ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚಿಸಿರುವುದರ ಕುರಿತು ಅಧ್ಯಕ್ಷರು ಪ್ರಶ್ನಿಸಿದಾಗ ಹೊರಗುತ್ತಿಗೆ ಆಧಾರದಲ್ಲಿ ವಾಹನ ಚಾಲಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಸರಕಾರಿ ಹಾಸ್ಟೆಲ್‍ಗಳಲ್ಲಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರತಿದಿನ ಒದಗಿಸುವ ಆಹಾರ ಪಟ್ಟಿಯನ್ನು ಎಲ್ಲಾ ಶಾಲೆಗಳಲ್ಲಿ ಮೆನು ಚಾರ್ಟ್ ಹಾಕುವ ಬಗ್ಗೆ ಅಧ್ಯಕ್ಷರು ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಎಲ್ಲಾ ಶಾಲೆಗಳಲ್ಲಿ ಅದರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಕೊರಗ ಸಮುದಾಯದ ಕಾಲನಿಗೆ ಚರಂಡಿ ವ್ಯವಸ್ಥೆ, ಬಾವಿ ದುರಸ್ತಿ, ಸಮುದಾಯ ಭವನದ ಆವರಣ ಗೋಡೆಯ ಕಾಮಗಾರಿಯನ್ನು ಏಪ್ರಿಲ್ ಅಂತ್ಯದೊಳಗೆ ಮುಗಿಸಲು ಅಧ್ಯಕ್ಷರು ಸಲಹೆ ನೀಡಿದರು.

ಜಿಲ್ಲೆಯಲ್ಲಿನ ಹಿಂದುಳಿದ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟಂತೆ 5 ಹಾಸ್ಟೇಲುಗಳಿಗೆ ಒಬ್ಬರೇ ವಾರ್ಡನ್ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದಾಗ ಇದರ ಕುರಿತು ಕ್ರಮ ಕೈಗೊಂಡು ಇಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಎಂ ವಿ ನಾಯಕ್ ಮಾತನಾಡಿ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ವಿಳಂಬವಿಲ್ಲದೇ ತಲುಪಿಸಬೇಕು. ಮುಂದಿನ ವರ್ಷದ ಕ್ರಿಯಾಯೋಜನೆಯನ್ನು ಕೂಡಲೇ ಆರಂಭಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿ.ಪಂ. ಯೋಜನಾ ನಿರ್ದೇಶಕ ಲೋಕೇಶ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.