ಕರಾವಳಿ

ಹನಿಟ್ರ್ಯಾಪ್ ಮೂಲಕ ಲಕ್ಷಾಂತರ ರೂ. ಸುಲಿಗೆ : ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಮೂವರು ಯುವತಿಯರ ಸಹಿತಾ ಆರು ಮಂದಿ ಸೆರೆ

Pinterest LinkedIn Tumblr

ಮಂಗಳೂರು, ಮಾರ್ಚ್ 24: ನಿವೃತ್ತ ಸರಕಾರಿ ಅಧಿಕಾರಿಯೊಬ್ಬರನ್ನು ಹನಿಟ್ರಾಪ್ ಜಾಲದಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಸಾಜ್ ನೆಪದಲ್ಲಿ ನಿವೃತ್ತ ಅಧಿಕಾರಿಯನ್ನು ಹನಿಟ್ರಾಪ್ ಮಾಡಿದ ಆರೋಪದ ಮೇಲೆ 3 ಮಂದಿ ಯುವತಿಯರು ಸೇರಿದಂತೆ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ಹನಿಟ್ರ್ಯಾಪ್‌ ಮೂಲಕ ಸುಲಿಗೆ ಮಾಡಿರುವ 1.5 ಲಕ್ಷ ರೂ. ನಗದು ಮತ್ತು ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿದಿ ಬಂಧಿತರಾದ ಚಿಕ್ಕಮಗಳೂರು ಜಿಲ್ಲೆ ಕಳಸದ ಸಂಸೆ ಗ್ರಾಮದ ರವಿ ಗೌಡ (42), ಮಂಗಳೂರಿನ ಜೈಲು ರೋಡ್‌ನ‌ ಪ್ರೀತೇಶ್‌ (36), ಪಡೀಲ್‌ ಕೋಡಕ್ಕಲ್‌ನ ರಮೇಶ್‌ (35) ಮತ್ತು ಮೂವರು ಯುವತಿಯರನ್ನು ಕಾವೂರು ಪೊಲೀಸರಿಗೆ ಒಪ್ಪಿಸಲಾಗಿದ್ದು, ಅವರು ಶುಕ್ರವಾರ ಕೋರ್ಟಿಗೆ ಹಾಜರುಪಡಿಸಿದ್ದಾರೆ. ಅವರಿಗೆ ಎ.5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತ ಮಹಿಳೆಯರು ವಿವಾಹಿತರಾಗಿರುತ್ತಾರೆ. ಪ್ರಕರಣ ಪತ್ತೆಯಾದ ಬಾಡಿಗೆ ಮನೆಯ ಮಹಿಳೆಗೆ ಆರೋಪಿ ರವಿಯ ಪರಿಚಯವಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆ ತನ್ನ ಪರಿಚಯದ ನಿವೃತ್ತ ಸರಕಾರಿ ಉದ್ಯೋಗಿಯನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ಪೈಕಿ ರವಿ ಗೌಡ ಈ ಹಿಂದೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಹಾಗೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಆರೋಪಿಗಳು ಈ ಹಿಂದೆಯೂ ಹಲವಾರು ವ್ಯಕ್ತಿಗಳನ್ನು ಹನಿಟ್ರಾಪ್ ನಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳು ಮತ್ತಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ತನಿಖೆ ವೇಳೆ ಲಭಿಸಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿವರ :

ಮಂಗಳೂರಿನ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು ಬೆನ್ನು ನೋವಿನಿಂದ ಬಳಲುತ್ತಿದ್ದು ನೋವು ನಿವಾರಣೆಗೆ ಮಸಾಜ್ ಮಾಡುವ ನೆಪದಲ್ಲಿ ನಗರದ ಮೇರಿಹಿಲ್ ನ ಮನೆಯೊಂದಕ್ಕೆ ಬರಲು ಹೇಳಲಾಗಿತ್ತು. ನಿವೃತ್ತ ಅಧಿಕಾರಿ ಮನೆಗೆ ಹೋದ ಕೂಡಲೇ 3 ಮಂದಿ ಅಪರಿಚಿತ ಯುವಕರು ಏಕಾಏಕಿ ಮನೆಗೆ ಪ್ರವೇಶಿಸಿ ಬೆದರಿಸಿದ್ದಾರೆ ಎಂದು ಹೇಳಲಾಗಿದೆ. ನಂತರ ಅವರನ್ನು ಬಲತ್ಕಾರವಾಗಿ ನಗ್ನಗೊಳಿಸಿ ಯುವತಿಯರ ಜೊತೆ ವೀಡಿಯೋ ಹಾಗೂ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಕೂಡಲೇ 3 ಲಕ್ಷ ರೂಪಾಯಿ ಹಣ ನೀಡದಿದ್ದರೆ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.

ಯುವಕರ ಬೆದರಿಕೆ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿ 3 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ನಂತರ ಈ ಘಟನೆಯ ಕುರಿತು ಸಂತ್ರಸ್ತ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಸಿದ ಮಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಯುವತಿಯರು ಸೇರಿದಂತೆ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತರಾಮ್‌, ಪಿಎಸ್‌ಐ ಶ್ಯಾಮ್‌ಸುಂದರ್‌, ಎಎಸ್‌ಐಗಳಾದ ಶಶಿಧರ ಶೆಟ್ಟಿ ಮತ್ತು ಹರೀಶ್‌, ಸಿಬಂದಿ ರಾಮ ಪೂಜಾರಿ, ಗಣೇಶ್‌, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್‌, ರಾಜೇಂದ್ರ ಪ್ರಸಾದ್‌, ಅಬ್ದುಲ್‌ ಜಬ್ಟಾರ್‌, ಮಣಿ, ಪ್ರಶಾಂತ್‌ ಶೆಟ್ಟಿ, ಅಶಿತ್‌ ಡಿ’ ಸೋಜಾ, ತೇಜ ಕುಮಾರ್‌, ರಿತೇಶ್‌ ಮುಂತಾದವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.