ಕರಾವಳಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ : 2017ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು ಹಾಗೂ ಪುಸ್ತಕ ಬಹುಮಾನ ವಿಜೇತರ ಆಯ್ಕೆ

Pinterest LinkedIn Tumblr

ಮಂಗಳೂರು, ಮಾರ್ಚ್ 23: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 3 ಮಂದಿ ಹಿರಿಯರನ್ನು ಆಯ್ಕೆ ಮಾಡಲಾಗಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಡಾ. ಎನ್. ನಾರಾಯಣ ಶೆಟ್ಟಿ, ಜಾನಪದ ಕ್ಷೇತ್ರದಲ್ಲಿ ಮಂಜನಾಡಿಯ ಶ್ರೀ ಸೇಸಪ್ಪ ಪಂಬದ, ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮತಿ ಎಚ್. ಶಕುಂತಳಾ ಭಟ್ ಅವರನ್ನು ಆಯಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಜೀವಮಾನದ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ 2017ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಪ್ರಶಸ್ತಿಗಾಗಿ 3 ವಿಭಾಗಗಳ ತಲಾ ಒಂದು ಪುಸ್ತಕವನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗಿದೆ. ಅಧ್ಯಯನವಿಭಾಗದಲ್ಲಿ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್‌ರವರ ‘ತುಳುನಾಡಿನ ಜನಪದ ಪ್ರದರ್ಶನ ಕಲೆಗಳು’ ಕವನ ಸಂಕಲನ ವಿಭಾಗದಲ್ಲಿ ಶ್ರೀಮತಿ ರೂಪಕಲಾ ಆಳ್ವರವರ ‘ಪಡೆಪ್ಪಿರೆ’, ಹಾಗೂ ಕಥಾ ಸಂಕಲನ ವಿಭಾಗದಲ್ಲಿ ಶ್ರೀ ಶಿಮಂತೂರು ಚಂದ್ರಹಾಸ ಸುವರ್ಣ ‘ಗಗ್ಗರ’ ಕೃತಿಯನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

2017ನೇ ಸಾಲಿನ ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಶಸ್ತಿ ಪತ್ರ, ಸ್ಮರಣೆಕೆ ಹಾಗೂ ಪುಸ್ತಕ ಬಹುಮಾನಕ್ಕೆ ರೂ.25,000/-  ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 7 ರಂದು ಶನಿವಾರ ತುಳುಭವನದ ‘ಸಿರಿಚಾವಡಿ’ ಯಲ್ಲಿ ಜರಗಲಿದೆ.

ಸಾಧಕರ ಪರಿಚಯ:

ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು: ಉಡುಪಿ ಜಿಲ್ಲೆ ಕಾರ್ಕಳ ತಾಲೂಕುದ ನಂದಿಕೂರುನಲ್ಲಿ 01-02-1934 ರಲ್ಲಿ ಜನಿಸಿದ ಎನ್. ನಾರಾಯಣ ಶೆಟ್ಟಿಯವರು ಬಾಲ್ಯದಲ್ಲಿಯೇ ಹಳೆಕನ್ನಡ ಕಾವ್ಯ ಮತ್ತು ಛಂದಸ್ಸಿನ ಅಧ್ಯಯನದ ಬಗ್ಗೆ ಆಸಕ್ತಿ ವಹಿಸಿದರು. ಅವರ ಅಧ್ಯಯನ ಗ್ರಂಥ ‘ಯಕ್ಷಗಾನ ಛಂದೋಬುಧಿ ಗೆ ಹಂಪಿ ಕನ್ನಡ ವಿ. ವಿ. ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಈ ಕೃತಿ ವಿಶೇಷ ಮಾನ್ಯತೆ ಪಡೆದುಕೊಂಡು ಶಿಮಂತೂರು ನಾರಾಯಣ್ ಶೆಟ್ಟಿಯವರಿಗೆ ಛಂದೊಬ್ರಹ್ಮ’ ಎಂಬ ಹೆಸರನ್ನು ತಂದು ಕೊಟ್ಟಿತು.

‘ಅನರ್ಘ್ಯ ಛಂದೂರತ್ನ’ ವಿಚಿತ್ರತಿಪದಿ ಎನ್ನುವ ಕೃತಿಯನ್ನು ಕೂಡಾ ಅವರು ರಚಿಸಿ ಪ್ರಕಟಿಸಿದ್ದಾರೆ. ಅದೇ ರೀತಿ ‘ಸೊರ್ಕುದ ಸಿರಿಗಿಂಡೆ’, ರಾಜಮುದ್ರಿಕೆ, ‘ಬೆಂಗ್‌ದಬಾಲೆನಾಗಿ’ ಹೀಗೆ ಹಲವಾರು ತುಳು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಕರ್ನಾಟಕ ಯಕ್ಷಗಾನ ಮೇಳದವರು ಅವರ ಹೆಚ್ಚಿನ ಕೃತಿಗಳನ್ನು ರಂಗಸ್ಥಳದಲ್ಲಿ ಪ್ರದರ್ಶಿಸಿರುತ್ತಾರೆ. ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ – ಪುರಸ್ಕಾರಗಳನ್ನು ನೀಡಿವೆ.

ಶ್ರೀ ಸೇಸಪ್ಪ ಪಂಬದ ಮಂಜನಾಡಿ: ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ಶ್ರೀ ಸೇಸಪ್ಪ ಪಂಬದರು ಕಳೆದ 60 ವರ್ಷ ಗಳಿಂದ ದೈವ ನಲಿಕೆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿ ಕೊಂಡವರು. ತನ್ನ ತಂದೆಯ ಜತೆಯಲ್ಲಿ ಕುಲಕಸುಬು ನಿರ್ವಹಣೆಗೆ ಹೋಗುತ್ತಿದ್ದ ಇವರು 16ನೇ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿದರು.

ಕಂಕನಾಡಿ ಗರಡಿ ಕ್ಷೇತ್ರ, ಅತ್ತಾವರ ಅರಸು ವೈದ್ಯನಾಥ ಕ್ಷೇತ್ರ ಕೊಡಕ್ಕಲ್ ವೈದ್ಯನಾಥ ಸುರತ್ಕಲ್ ವೀರಭದ್ರ ಕ್ಷೇತ್ರ, ಮಂಜನಾಡಿ ಮಲರಾಯೆ, ನೀರ್‌ಮಾರ್ಗ ಜಾರಂದಾಯ, ತಲಪಾಡಿ ಮಲರಾಯೆ, ಉಳ್ಳಾಲ ಮಲರಾಯ ಮುಂತಾದ ಕಡೆಗಳಲ್ಲಿ ರಾಜನ್ ದೈವಗಳಿಗೆ ಸೇವೆ ಸಲ್ಲಿಸಿರುತ್ತಾರೆ. ಆಯಾ ದೈವಗಳ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿ ಪಾಡ್ದನಗಳ ಮೂಲಕ, ನುಡಿಕಟ್ಟುಗಳ ಮೂಲಕ ಸ್ಪಷ್ಟವಾಗಿ ತಿಳಿಸಿ ಹೇಳುವ ಸಾಮರ್ಥ್ಯ ಹೊಂದಿದ್ದ ಇವರು ತನ್ನ ಕಾರ್ಯಕ್ಷೇತ್ರದಲ್ಲಿ ವಿಶೇಷ ಮಾನ್ಯತೆ- ಗೌರವವನ್ನು ಪಡೆದು ಕೊಂಡಿದ್ದಾರೆ.

ಶ್ರೀಮತಿ ಹೆಚ್ ಶಕುಂತಳಾ ಭಟ್: ಕಳೆದ 40 ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ತುಳು ಕನ್ನಡ ಭಾಷೆಯಲ್ಲಿ 70ಕ್ಕು ಅಧಿಕ ಕೃತಿಗಳನ್ನು ರಚಿಸಿರುವ ಶ್ರೀಮತಿ ಹೆಚ್. ಶಕುಂತಳಾ ಭಟ್‌ರವರು ಹಳೆಯಂಗಡಿ ನಿವಾಸಿ. ತುಳು ನಾಟಕ ಕ್ಷೇತ್ರದಲ್ಲಿ ಇವರಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಹಲವು ಬಾರಿ ಬಂದಿರುತ್ತದೆ. ಕಥೆ, ಕಾದಂಬರಿ, ಕವನ, ಲೇಖನ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿರುತ್ತಾರೆ.

ರಾಜ್ಯ – ರಾಷ್ಟ್ರಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿರುವ ಇವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಹೆಸರುಗಳಿಸಿರುತ್ತಾರೆ. ಹತ್ತು ಹಲವು ಸನ್ಮಾನ ಗೌರವ ಇವರಿಗೆ ಲಭಿಸಿದೆ.

Comments are closed.