ಕರಾವಳಿ

“ಕೇಳಿಸದೆ ನಮ್ಮ ಕರುಳಿನ ಕೂಗು?’’: ಪತ್ರಕರ್ತ ಪ್ರಶಾಂತ್ ಸುವರ್ಣರಿಗೆ ಪ.ಗೋ ಪ್ರಶಸ್ತಿ

Pinterest LinkedIn Tumblr

ಮಂಗಳೂರು, ಮಾರ್ಚ್. 23: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(ರಿ) (ಪದ್ಯಾಣ ಗೋಪಾಲಕೃಷ್ಣ ) ಹೆಸರಿನಲ್ಲಿ ನೀಡಲಾಗುತ್ತಿರುವ 2018ರ ಪ.ಗೋ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.

ಈ ಬಾರಿಯ ಪ್ರಶಸ್ತಿಗೆ ಭಾಜನಾರದ ‘ವಿಜಯವಾಣಿ’ ಪತ್ರಿಕೆಯ ಉಪಸಂಪಾದಕ ಪ್ರಶಾಂತ್ ಎಸ್ ಸುವರ್ಣ ಸಿದ್ದಕಟ್ಟೆ ಅವರಿಗೆ ಹಿರಿಯ ಪತ್ರಕರ್ತೆ ಅನಿತಾ ಪಿಂಟೋ ಅವರು ಪ.ಗೋ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 2017ರ ಜೂನ್ 03ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ “ಕೇಳಿಸದೆ ನಮ್ಮ ಕರುಳಿನ ಕೂಗು?’’ ಅವರ ಈ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ.10,001/ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಈ ವೇಳೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪತ್ರಕರ್ತರು ತುರ್ತು ಸಂದರ್ಭಗಳಲ್ಲಿ ಸೈನಿಕರಂತೆ, ಕೆಲವೊಮ್ಮೆ ಅವರಿಗೂ ಮುಂಚಿತವಾಗಿ ಸ್ಥಳಕ್ಕೆ ತಲುಪಿ ಕಾರ್ಯ ನಿರ್ವಹಿಸಿರುವುದನ್ನು ಗಮನಿಸಿರುವುದಾಗಿ ಹೇಳಿದರು.

ದೇಶದ ಗುಜರಾತ್ನಲ್ಲಿ ಸಂಭವಿಸಿದ ಭೀಕರ ಭೂಕಂಪ, ದಕ್ಷಿಣ ಭಾರತದಲ್ಲಿ ಸಂಭವಿಸಿದ ಸುನಾಮಿಯ ಸಂದರ್ಭದಲ್ಲಿ ಗುಜರಾತ್, ನಾಗಪಟ್ಟಣಂ ಪ್ರದೇಶ ಗಳಿಗೆ ನಾನು ಭೇಟಿ ನೀಡಿದಾಗ ತುರ್ತು ಕಾರ್ಯಾಚರಣೆ ನಡೆಸಲು ಸರಕಾರಿ ಯಂತ್ರಗಳು ಆಗಮಿಸುವ ಮೊದಲೆ ಯಾವೂದೇ ಅಪಾಯವನ್ನು ಲೆಕ್ಕಿಸದೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಸೈನಿಕರು ಪ್ರವೇಶ ಮಾಡದೆ ಇರುವ ಪ್ರದೇಶಕ್ಕೆ ಅಪಾಯವನ್ನು ಲೆಕ್ಕಿಸದೆ ಪತ್ರಕರ್ತರು ಹೋಗಿ ವರದಿ ಮಾಡಿದ್ದಾರೆ. ಈ ರೀತಿಯ ಪತ್ರಕರ್ತರ ಧೈರ್ಯ , ಸ್ಥಿತ ಪ್ರಜ್ಞತೆಯಿಂದ ಸಾಮಾಜಿಕ ಪರಿವರ್ತನೆಗೆ ಕಾರಣವಾಗಬಹುದು ಈ ನಿಟ್ಟಿ ನಲ್ಲಿ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದು ಪತ್ರಕರ್ತೆ ಅನಿತಾ ಪಿಂಟೋ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡೀಸ್, ಪ.ಗೋ.ಪ್ರಶಸ್ತಿ ಪಡೆದ ಪ್ರಶಾಂತ್ ಸುವರ್ಣ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷ ಪಿ.ಬಿ .ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಭವನ ಟ್ರಸ್ಟ್ ನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿದರು, ಪ್ರೆಸ್ ಕ್ಲಬ್ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಸ್ಮರಣಿಕೆ ವಿತರಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.

Comments are closed.