ಕರಾವಳಿ

ಸುರತ್ಕಲ್‌ನಲ್ಲಿ 100ಕ್ಕೂ ಹೆಚ್ಚು ಅಂಗಡಿ ಎತ್ತಂಗಡಿ ಪ್ರಕರಣ : ಮುನೀರ್ ಕಾಟಿಪಳ್ಳ ತೀವ್ರ ಖಂಡನೆ

Pinterest LinkedIn Tumblr

ಮಂಗಳೂರು, ಮಾರ್ಚ್. 23: ಮಂಗಳೂರು ಮಹಾನಗರ ಪಾಲಿಕೆ ಗುರುವಾರ ದಿಢೀರ್ ಕಾರ್ಯಾಚರಣೆ ನಡೆಸಿ ಸುರತ್ಕಲ್ ಜಂಕ್ಷನ್ ಬಳಿಯ ಸುಮಾರು 100ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಿರುವ ಕ್ರಮವನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಸುರತ್ಕಲ್ ಮಾರುಕಟ್ಟೆ ಅಂಗಡಿಗಳನ್ನು ಸ್ಥಳಾಂತರಿಸುವಲ್ಲಿ ನಿಯಮಗಳನ್ನು ಪಾಲಿಸದ ನಗರ ಪಾಲಿಕೆ, ಅಭದ್ರತೆಯ ಗೊಂದಲದಲ್ಲಿದ್ದ ಅಂಗಡಿ ಮಾಲಕರ ಮೇಲೆ ಬಲಪ್ರಯೋಗ ಮಾಡಿರುವುದು, ಬೆಲೆಬಾಳುವ ವಸ್ತುಗಳಿದ್ದ ಅಂಗಡಿಗಳನ್ನು ಯಂತ್ರಗಳನ್ನು ಬಳಸಿ ದ್ವಂಸ ಮಾಡಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿದೆ. ಇದು ಖಂಡನೀಯ. ಶಾಸಕ ಮೊಯ್ದಿನ್ ಬಾವ ಮತ್ತು ಪಾಲಿಕೆ ಅಧಿಕಾರಿಗಳ ತಪ್ಪುಗಳನ್ನು ಮರೆಮಾಚಲು ಇಂತಹ ಅಮಾನವೀಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮುನೀರ್ ಕಾಟಿಪಳ್ಳ ಆಪಾದಿಸಿದ್ದಾರೆ.

ಐದು ಕೋಟಿ ವೆಚ್ಚದ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸುವಾಗ, ಇಕ್ಕಟ್ಟಾದ ಅಂಗಡಿಗಳ ಬದಲಿಗೆ ಸ್ವಲ್ಪ ವಿಶಾಲವಾದ ಅಂಗಡಿಕೋಣೆ ನಿರ್ಮಿಸಿ, ಸಾಕಷ್ಟು ಮೂಲಭೂತ ಸೌಕರ್ಯಗಳನನ್ನು ಒದಗಿಸಬೇಕಿತ್ತು. ಅಂಗಡಿ ವಿತರಣೆಯಲ್ಲಿ ಪಾರದರ್ಶಕ ಲಾಟರಿ ವಿಧಾನ ಅನುಸರಿಸಬೇಕಿತ್ತು. ಹೊಸ ಮಾರುಕಟ್ಟೆಯಲ್ಲಿ ಮೂಲ ಅಂಗಡಿದಾರರಿಗೆ ಅಂಗಡಿಗಳನ್ನು ಸಿಗುವುದನ್ನು ನೋಟೀಸಿನಲ್ಲಿ ಖಾತರಿಗೊಳಿಸಬೇಕಿತ್ತು. ಹಾಗೂ ಅಂಗಡಿದಾರರಿಗೆ ವೈಯುಕ್ತಿಕವಾಗಿ ನೋಟಿಸು ನೀಡಬೇಕಿತ್ತು. ಈ ರೀತಿ ನಿಯಮಗಳನ್ನು ಪಾಲಿಸದೆ ಶಾಸಕರು ಮತ್ತು ಪಾಲಿಕೆ ಕಮೀಷನರ್ ಬೇಕಾ ಬಿಟ್ಟಿಯಾಗಿ ನಡೆದುಕೊಂಡಿದ್ದು ಸಹಜವಾಗಿ ಮಾರುಕಟ್ಟೆ ವ್ಯಾಪಾರಸ್ಥರಲ್ಲಿ ಆತಂಕ, ಗೊಂದಲ ನಿರ್ಮಾಣವಾಗಿತ್ತು.

ತಾತ್ಕಾಲಿಕ ಮಾರುಕಟ್ಟೆಗೆ ತೆರಳಲು ಹಿಂದೇಟು ಹಾಕುವಂತಾಗಿತ್ತು. ಅದರಲ್ಲೂ ಮೀನು ಮಾರುಕಟ್ಟೆಯ ಮಹಿಳಾ ವ್ಯಾಪಾರಸ್ಥರಿಗೆ ಮುಂದಿನ ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅನುಕೂಲವಾದ ಸ್ಥಳ ಸಿಗುವ ಭರವಸೆ ನೀಡದಿರು ವುದು ಬಡ ವ್ಯಾಪಾರಿಗಳು ಸ್ಥಳಾಂತರಕ್ಕೆ ಹಿಂದೇಟು ಹಾಕುವಂತೆ ಮಾಡಿತ್ತು. ಅಂತವರಿಗೆ ನಿಯಮಬದ್ದವಾಗಿ ನ್ಯಾಯದ ಖಾತರಿಯನ್ನು ನೀಡಿ ಮನವೊಲಿಸುವ ಬದಲು, ಲಕ್ಷಾಂತರ ಮೌಲ್ಯಗಳ ಸಾಮಾಗ್ರಿಗಳಿದ್ದ ಅಂಗಡಿಗಳ ಮೇಲೆ ನೂರಾರು ಪೊಲೀಸರ ಬಲದೊಂದಿಗೆ ಬುಲ್ಡೋಜರ್ ನುಗ್ಗಿಸಿರುವುದು ಅನ್ಯಾಯದ ಪರಮಾವಧಿ ಎಂದು ಹೇಳಿರುವ ಮುನೀರ್ ಕಾಟಿಪಳ್ಳ, ಈಗಲಾದರು ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಅಂಗಡಿದಾರರಿಗೆ ನಿಯಮ ಬದ್ಧವಾದ ನೋಟಿಸ್ ನೀಡಬೇಕು ಹಾಗೂ ಸೊತ್ತು ನಾಶ ಹೊಂದಿರುವ ಮಾರುಕಟ್ಟೆ ವ್ಯಾಪಾರಸ್ಥರಿಗೆ ಪರಿಹಾರ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಬೆಳಿಗಿನಿಂದ ಸಂಜೆಯವರೆಗೆ ಕಾರ್ಯಾಚರಣೆ : ನೂರಕ್ಕೂ ಅಧಿಕ ಅಂಗಡಿಗಳ ಎತ್ತಂಗಡಿ

ಗುರುವಾರ ಬೆಳಗ್ಗೆ ಈ ಕಾರ್ಯಾಚರಣೆ ನಡೆದಿದ್ದು, ತೆರವು ಕಾರ್ಯಾಚರಣೆಗೆ ಎರಡು ಜೆಸಿಬಿಗಳನ್ನು ಬಳಸಲಾಗಿತ್ತು. ಬೆಳಿಗಿನಿಂದ ಸಂಜೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ ನೂರಕ್ಕೂ ಅಧಿಕ ಅಂಗಡಿಗಳ ಎತ್ತಂಗಡಿ ಮಾಡಲಾಗಿತ್ತು. ಅಂಗಡಿಗಳ ತೆರವಿನ ಬಗ್ಗೆ ಕೆಲವರಿಗೆ ಅಸಮಧಾನ ಉಂಟಾಗಿದ್ದು, ನಮಗೆ ಯಾವುದೇ ಮಾಹಿತಿ ನೀಡದೆ ಧ್ವಂಸ ಮಾಡಿರುವುದಾಗಿ ತಿಳಿಸಿದ್ದರು. ಮತ್ತೆ ಕೆಲವರು ಗುರುವಾರ ಸಂಜೆಯಿಂದ ತೆರವುಗೊಳಿಸುವುದಾಗಿ ಮನಪಾ ನಮಗೆ ನೋಟೀಸ್ ನೀಡಿದೆ ಎಂದಿದ್ದರು.

Comments are closed.