ಕರಾವಳಿ

ಸಿದ್ಧರಾಮಯ್ಯ ಸರಕಾರ ಕೃಷಿಕರ, ಕಾರ್ಮಿಕರ ಪರ : ರಾಕೇಶ್ ಮಲ್ಲಿ

Pinterest LinkedIn Tumblr

ಕುಂದಾಪುರ: 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಲ್ಪಟ್ಟ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವುದರ ಜೊತೆಗೆ ಹಸಿದವರಿಗಾಗಿ ಅನ್ನಭಾಗ್ಯ, ರೈತರ ಅಭ್ಯುದಯಕ್ಕಾಗಿ ಕೃಷಿ ಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಸೌರಭಾಗ್ಯ, ವಸತಿಭಾಗ್ಯ, ವಿದ್ಯಾಸಿರಿ, ನಿರ್ಮಲಭಾಗ್ಯ, ಕೃಷಿ ಸಾಲ ಮನ್ನಾ, ಮುಂತಾದ ಜನಪರ ಯೋಜನೆಗಳನ್ನು ನೀಡಿರುವ ಸರಕಾರ ಸಿದ್ಧರಾಮಯ್ಯನವರ ಕಾಂಗ್ರೇಸ್ ಸರಕಾರವಾಗಿದೆ. ಇಂತಹ ಜನಪರ ಕಾಳಜಿಯ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಆ ಮೂಲಕ ಕೃಷಿಕರ ಮತ್ತು ಕಾರ್ಮಿಕರ ಉದ್ಧಾರ ಸಾಧ್ಯ ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ. ಅವರು ಹಂಗಳೂರಿನಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಅದು ತನ್ನ ಅಧಿಕಾರದ ಹಪಾಹಪಿಗೆ ಹಿಂದುಳಿದ ವರ್ಗದ ಯುವಕರನ್ನು ಬಲಿಕೊಡುತ್ತಿದೆ. ಉತ್ತಮ ವಿದ್ಯೆ ಪಡೆದು ಉನ್ನತ ಉದ್ಯೋಗ ಪಡೆಯಬೇಕಿದ್ದ ಯುವಕರು ಬಿಜೆಪಿಗರ ಬ್ರೈನ್‌ವಾಷ್‌ಗೊಳಗಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೊಡೆದಾಟ, ಬಡಿದಾಟ ಪ್ರಕರಣಗಳಲ್ಲಿ ಪಾಲ್ಗೊಂಡು ಒಂದಷ್ಟು ಜನ ಆಸ್ಪತ್ರೆ, ಜೈಲು ಸೇರುತ್ತಿದ್ದಾರೆ. ಕೆಲವು ಹತಭಾಗ್ಯರು ಎಳೆಪ್ರಾಯದಲ್ಲೆ ಕೊಲೆಯಾಗುತ್ತಿದ್ದಾರೆ. ಇದು ಖಂಡನೀಯ ಎಂದು ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಕಿಡಿಕಾಡಿದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 140 ಡಾಲರ್ ಇದ್ದಾಗ ಪೆಟ್ರೋಲ್ 69 ರೂ.ಗೆ ಹಾಗೂ ಡಿಸೇಲ್ 57 ರೂ.ಗೆ ಸಿಗುತ್ತಿತ್ತು. ಆದರೆ ಇಂದು ಅದೇ ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 47 ಡಾಲರ್‌ಗೆ ಕುಸಿದಿದ್ದರೂ ಈ ದೇಶದಲ್ಲಿ ಪೆಟ್ರೋಲ್ ಇಂದಿನ ಮೋದಿ ಆಡಳಿತದಲ್ಲಿ ಡಿಸೇಲ್ ಬೆಲೆ ಕುಸಿದಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಬೆಲೆಯೇರಿಕೆಯಾಗುತ್ತಿದೆ. ಅದರ ಪರಿಣಾಮವಾಗಿ ಸಾಮಾನ್ಯ ಜನರು ಉಪಯೋಗಿಸುವ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆದರೆ ಅನಿಲ ಕಂಪೆನಿಯ ಮಾಲಕರು ದಿನದಿಂದ ದಿನಕ್ಕೆ ಶ್ರೀಮಂತರಾಗುತ್ತಿದ್ದಾರೆ. ಹಾಗಾದರೆ ಅಭಿವೃದ್ಧಿ ಎಂದರೆ ಇದೇನಾ? ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಕೆಲವರನ್ನು ಎಲ್ಲಾ ಕಾಲ ಮೋಸಪಡಿಸಬಹುದು. ಕೆಲಕಾಲ ಎಲ್ಲರನ್ನು ಮೋಸಪಡಿಸಬಹುದು. ಆದರೆ ಎಲ್ಲರನ್ನು ಎಲ್ಲಾ ಕಾಲದಲ್ಲೂ ಮೋಸಪಡಿಸಲು ಸಾಧ್ಯವಿಲ್ಲ ಎನ್ನುವುದನ್ನು ಬಿಜೆಪಿಗರು ಅರಿಯಬೇಕು. 2014ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಮೋದಿಯವರು ಅಚ್ಚೆದಿನ್ ಬರುತ್ತೆ ಎಂದಿದ್ದರು. ಸ್ವಿಸ್ ಬ್ಯಾಂಕ್‌ನಿಂದ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಏನಾಗಿದೆ ಎಂದು ಇಡೀ ದೇಶದ ಜನ ಕಂಡಿದ್ದಾರೆ. ಉತ್ತಮ ಆಡಳಿತ ನೀಡಿದ ಸಿದ್ಧರಾಮಯ್ಯ ಸರಕಾರ ಮತ್ತೊಮ್ಮೆ ಆಡಳಿತಕ್ಕೆ ಬರುಲಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ರಾಜು ಪೂಜಾರಿ ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಬ್ಲಾಕ್ ಉಪಾಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಐಟಿಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಹಂಗಳೂರು ಗ್ರಾ.ಪಂ. ಉಪಾಧ್ಯಕ್ಷ ಸ್ಟೀವನ್ ಡಿ’ಕೋಸ್ಟಾ, ಸದಸ್ಯ ಸುಧಾಕರ ಪೂಜಾರಿ, ಮುಖಂಡರಾದ ಅರ್ಚಿಬಲ್ ಕ್ವಾಡ್ರಸ್, ರೇವತಿ ಸಂಪತ್ ಕುಮಾರ್ ಶೆಟ್ಟಿ, ಸುಗುಣ, ಜಾನೆಟ್ ಮೆಂಡೊನ್ಸಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments are closed.