ಕರಾವಳಿ

ಬೇಟೆಗೆ ಹೋದ ಯುವಕರಿಬ್ಬರ ಮೃತ ದೇಹ ಪತ್ತೆ : ವಿದ್ಯುತ್ ಸ್ಪರ್ಶ ಶಂಕೆ

Pinterest LinkedIn Tumblr

ಮೂಡುಬಿದಿರೆ, ಮಾರ್ಚ್. 23: ಬೇಟೆಗೆ ಹೋದ ಯುವಕರಿಬ್ಬರ ಮೃತ ದೇಹ ಗುರುವಾರ ಸಂಜೆ ಕರಿಂಜೆಯ ಗದ್ದೆಯ ಬದಿಯಲ್ಲಿ ಪತ್ತೆಯಾಗಿದ್ದು, ಇವರಿಬ್ಬರು ಕಳೆದ ಮೂರು ದಿನಗಳ ಹಿಂದೆ ಶಿಕಾರಿಗೆಂದು ಹೋಗಿ ನಂತರ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.

ಕೃಷಿಕ ಕರಿಂಜೆ ಕಕ್ಕೆಬೆಟ್ಟು ನಿವಾಸಿ ಪ್ರವೀಣ್ ತೌರೋ (32) ಮತ್ತು ಉದ್ಯಮಿ, ಪ್ರಾಂತ್ಯ ಗ್ರಾಮದ ಪೇಪರ್ಮಿಲ್ ನಿವಾಸಿ ಗ್ರೇಶನ್ ರೊಡ್ರಿಗಸ್ (34) ಮೃತರು ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಬೊಲೇರೋ ವಾಹನದಲ್ಲಿ ಕರಿಂಜೆ ಗುತ್ತು ಶಾಲೆಯ ಬಳಿಯಿಂದ ಮಾರಿಂಜ ಅರಣ್ಯ ಪ್ರದೇಶಕ್ಕೆ ಶಿಕಾರಿಗೆ ಹೊರಟು ವಾಹನವನ್ನು ಕುಕ್ಯಟ್ಟೆಗುತ್ತು ಯಶವಂತ ಶೆಟ್ಟಿ ಎಂಬವರ ಮನೆಯಂಗಳದಲ್ಲಿ ನಿಲ್ಲಿಸಿ ಹೋಗಿದ್ದು, ನಂತರ ನಾಪತ್ತೆಯಾಗಿದ್ದರು.

ಗುರುವಾರ ಬೆಳಗ್ಗೆಯಿಂದ ಸುಮಾರು 150 ಯುವಕರು ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆಗೆ ಗದ್ದೆಯ ಬದಿಯಲ್ಲಿ ಇಬ್ಬರ ಮೃತದೇಹಗಳು, ಪಕ್ಕದಲ್ಲಿ ಟಾರ್ಚ್ಲೈಟ್, ನೀರಿನ ಬಾಟಲಿ ಮತ್ತು ಕೋವಿ ಪತ್ತೆಯಾಗಿದೆ.

ಇವರಿಬ್ಬರೂ ಸೋಮವಾರ ರಾತ್ರಿಯೂ ಶಿಕಾರಿಗೆ ಹೋಗಿ ಕಾಡು ಪ್ರಾಣಿಗಳನ್ನು ಹಿಡಿದುಕೊಂಡು ಬಂದಿದ್ದರು ಎನ್ನಲಾಗಿದ್ದು, ನಂತರ ಮಂಗಳವಾರ ಇವರಿಬ್ಬರು ಜತೆಯಾಗಿ ಶಿಕಾರಿಗೆ ಹೋಗಿದ್ದು, ಜತೆಯಾಗಿಯೇ ಮೃತಪಟ್ಟಿದ್ದಾರೆ. ಗ್ರೇಶನ್ ಅವರು ವಿವಾಹಿತರಾಗಿದ್ದು, ಪತ್ನಿ ಮತ್ತು ಪುಟ್ಟ ಮಗುವನ್ನು ಅಗಲಿದ್ದಾರೆ. ಪ್ರವೀಣ್ ತೌರೋ ಅವರು ಅವಿವಾಹಿತರಾಗಿದ್ದು, ತಂದೆ ತಾಯಿಯನ್ನು ಕಳೆದುಕೊಂಡಿದ್ದರು.

ಪಣಂಬೂರು ಉಪವಿಭಾಗದ ಎಸಿಪಿ ರಾಜೇಂದ್ರ ಕುಮಾರ್, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಉಪನಿರೀಕ್ಷಕ ದೇಜಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮೆಸ್ಕಾಂ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿದ್ಯುತ್ ಆಘಾತ : ಶಂಕೆ

ಕಾಡು ಪ್ರಾಣಿಗಳನ್ನು ಭೇಟೆಯಾಡಲು ವಿದ್ಯುತ್ ಕಂಬದಿಂದ ತಂತಿಯ ಮೂಲಕ ಗದ್ದೆಯ ಬದಿಯವರೆಗೆ ವಿದ್ಯುತ್ ಪ್ರವಹಿಸುವಂತೆ ಮಾಡಿದ್ದನ್ನು ಗಮನಿಸದೆ ಅದನ್ನು ಸ್ಪರ್ಷಿಸಿದ ಪರಿಣಾಮ ವಿದ್ಯುತ್ ಆಘಾತದಿಂದ ಮೃತಪಟ್ಟಿರಬಹುದು ಎಂಬ ಸಂಶಯ ಸ್ಥಳೀಯರನ್ನು ಕಾಡುತ್ತಿದೆ. ಆದರೆ ಘಟನೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ವರದಿ ಕೃಪೆ :ವಾಭಾ

Comments are closed.