ಕರಾವಳಿ

ಜನಾಶೀರ್ವಾದ ಯಾತ್ರೆ’ : ಮಂಗಳೂರಿನಲ್ಲಿ ತುಳುವಿನಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ – ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ

Pinterest LinkedIn Tumblr

ಮಂಗಳೂರು, ಮಾರ್ಚ್ 20 : ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಕರಾವಳಿಯ ಅವಳಿ ಜಿಲ್ಲೆಗಳಿಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಮಂಗಳೂರು ಸಂಜೆ ಮಂಗಳೂರಿನಲ್ಲಿ “ಜನಾಶೀರ್ವಾದ ಯಾತ್ರೆ’ಯಲ್ಲಿ ಪಾಲ್ಗೊಂಡು ನಗರದ ನೆಹರು ಮೈದಾನದ ಉತ್ತರ ದಿಕ್ಕಿಗೆ ಹಾಕಲಾದ ಬೃಹತ್ ವೇದಿಕೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ತಮ್ಮ ಭಾಷಣದ ಆರಂಭದಲ್ಲಿ “ನಿಕ್ಲೆಗ್ ಮಾತೆರ್‌ಗ್ಲಾ ಎನ್ನ ನಮಸ್ಕಾರ” ಎಂದು ಹೇಳುವ ಮೂಲಕ ರಾಹುಲ್ ಗಾಂಧಿಯವರು ತುಳುವಿನಲ್ಲಿ ಭಾಷಣ ಆರಂಭಿಸಿದರು .ಜನಾಶೀರ್ವಾದ ಸಮಾವೇಶವನ್ನು ಉದ್ದೇಶಿಸಿ ತುಳುವಿನಲ್ಲಿ ಭಾಷಣ ಪ್ರಾರಂಭಿಸಿದ ರಾಹುಲ್ ಗಾಂಧಿಯವರು ನೆರೆದ ಜನರ ಚಪ್ಪಾಳೆ ಗಿಟ್ಟಿಸಿದರು.

ಬಳಿಕ ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿಯವರನ್ನು ಟೀಕಿಸಿದ ರಾಹುಲ್ ಗಾಂಧಿಯವರು, ‘ನೂರಾರು ವರ್ಷಗಳ ಹಿಂದೆ ಮಹಾಭಾರತದಲ್ಲಿ ಕೌರವ ಹಾಗೂ ಪಾಂಡವರ ನಡುವೆ ಯುದ್ಧ ನಡೆದಿತ್ತು. ಅಲ್ಲಿ ನಡೆದಿದ್ದು ಅಧಿಕಾರ ಹಾಗು ಸತ್ಯದ ನಡುವಿನ ಯುದ್ದ. ಕೌರವರು ಅಧಿಕಾರಕ್ಕೆ ಯುದ್ಧ ಮಾಡಿದರು, ಆದರೆ, ಪಾಂಡವರು ಸತ್ಯಕ್ಕಾಗಿ ಯುದ್ಧ ಮಾಡಿದರು. ಬಿಜೆಪಿ ಕೌರವರಂತೆ ಅಧಿಕಾರಕ್ಕಾಗಿ ಹಂಬಲಿಸುತ್ತಾರೆ’ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಗೋವಾ, ಮಣಿಪುರ, ಮೇಘಾಲಯದಲ್ಲಿ ಹಣ ಕೊಟ್ಟು ನಾಯಕರನ್ನು ಬಿಜೆಪಿಗರು ಖರೀದಿಸಿ ಅಧಿಕಾರ ಹಿಡಿದರು. ಹಿಂಸೆ ಮಾಡಿ, ಹಣ ಬಲ ಪ್ರಯೋಗ, ವಿಭಾಗಿಸುವ ತಂತ್ರದಿಂದ ಬಿಜೆಪಿ ಎಲ್ಲವನ್ನೂ ಖರೀದಿಸುವ ಕೆಲಸ ಮಾಡುತ್ತಿದೆ. ಮೋದಿ ಬಂದು ಒಂದರ ಹಿಂದೊಂದು ಸುಳ್ಳು‌ ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರದ ಹಿಂದೆ ಓಡುತ್ತಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತದೆ. ಕಾಂಗ್ರೆಸ್ ಸತ್ಯಕ್ಕಾಗಿರುವುದು, ದೇಶಕ್ಕಾಗಿ ಕಾಂಗ್ರೆಸ್‌ ದುಡಿದಿದೆ , ದುಡಿಯುತ್ತಿದೆ. ನಾವು ಕಾಂಗ್ರೆಸ್‌ ಪಕ್ಷದವರು ಪಾಂಡವರಂತೆ, ಬಿಜೆಪಿಯವರು ಕೌರವರಂತೆ ಎಂದು ರಾಹುಲ್ ಗಾಂಧಿ ಹೇಳಿದರು.

ಬಳಿಕ ತಮ್ಮ ಭಾಷಣದಲ್ಲಿ ಶ್ರೀ ನಾರಾಯಣ ಗುರು ಹಾಗೂ ಬಸವಣ್ಣರಂತಹ ಮಹಾಪುರುಷರ ಅದರ್ಶದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ಅವರು “ನುಡಿದಂತೆ ನಡೆ” ಎಂದು ಕನ್ನಡದಲ್ಲಿ ಹೇಳುವ ಮೂಲಕ ಮತ್ತೊಮ್ಮೆ ಕರಾವಳಿಯ ಜನತೆಯ ಮೆಚ್ಚುಗೆಗೆ ಪಾತ್ರರಾದರು. ಮಾತ್ರವಲ್ಲದೇ “ನುಡಿದಂತೆ ನಡೆ” ಎಂದರೆ ಏನು ಎಂಬುವುದರ ಬಗ್ಗೆ ಹಿಂದಿಯಲ್ಲಿ ವಿಶ್ಲೇಷಣೆ ಮಾಡಿದರು.

ನುಡಿದಂತೆ ನಡೆ ಮೋದಿಜಿ ಎಂದ ರಾಹುಲ್ 15 ಲಕ್ಷ ರೂಪಾಯಿ ಬ್ಯಾಂಕ್ ಖಾತೆ ಹಾಕುತ್ತೇನೆ, ನನ್ನನ್ನು ಪ್ರಧಾನಿ ಮಾಡಿ ಎಂದು ಮೋದಿ ಹೇಳಿದ್ದರು. ಆದರೆ, ನುಡಿದಂತೆ ನಡೆದಿಲ್ಲ ಮೋದಿ. ಅಮೇರಿಕಕ್ಕೆ ಹೋಗಿ ಮೋದಿ 60 ವರ್ಷ ಭಾರತದಲ್ಲಿ ಏನೂ ನಡೆದಿಲ್ಲ ಎನ್ನುತ್ತಾರೆ. ಇದು ಅವರು ಪೂರ್ವಜರಿಗೆ ಅವಮಾನ‌ ಮಾಡಿದಂತೆ. ಅವರು ಹೇಳುವಂತೆ ಹಿಂದೆ ನಾರಾಯಣ ಗುರು, ಅಬ್ಬಕ್ಕ, ಬಸವಣ್ಣ ಇರಲಿಲ್ಲವೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಶ್ರೀಮಂತರು ಹಣ ಪಡೆದು ಪರಾರಿಯಾದರು ತನಗೆ ಇಷ್ಟವಿಲ್ಲವೆಂದು ನವೆಂಬರ್ 8 ರಂದು 500, 1000 ಸಾವಿರದ ನೋಟುಗಳನ್ನು ಪ್ರಧಾನಿ ಮೋದಿ ಬ್ಯಾನ್ ಮಾಡಿದರು. ಜನರ ದುಡ್ಡನ್ನು ನೀರವ್ ಮೋದಿ ತೆಗೆದುಕೊಂಡು ಪರಾರಿಯಾದಾಗ ಮೌನವಾಗಿದ್ದರು. ಬ್ಯಾಂಕ್ ಮುಂದೆ ಕ್ಯೂ ನಿಂತರೂ ನಿಮಗೆ ಹೊಸ ನೋಟು ಸಿಗಲಿಲ್ಲ. ಆದರೆ, ಶ್ರೀಮಂತರಿಗೆ ಹಣ ಸುಲಭವಾಗಿ ಸಿಕ್ಕಿತು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ನಮ್ಮ ಪಕ್ಷದ ಆಡಳಿತ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ ನಡೆಸಲಿದೆ. ಈ ಹಿಂದೆ ಮಾಡಿದ್ದಕ್ಕಿಂತ ದ್ವಿಗುಣ ಕೆಲಸ ಕಾಂಗ್ರೆಸ್‌ ರಾಜ್ಯದಲ್ಲಿ ಮಾಡಲಿದೆ. ಬಿಜೆಪಿ ಅಧಿಕಾರಕ್ಕಾಗಿ ಸಂಘಟನೆ ಮಾಡುತ್ತದೆ. ಮೋದಿ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆ ವೇದಿಕೆಯಲ್ಲಿ 4 ಮುಖಂಡರು ಜೈಲಿನಲ್ಲಿ ಸಮಯ ಕಳೆದವರು ಇರುತ್ತಾರೆ. ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿಯಾಗಿದ್ದವರು ಕೂಡಾ ವೇದಿಕೆಯಲ್ಲಿರುತ್ತಾರೆ. ಭಾರತೀಯರು ಯೋಚನೆ ಮಾಡುತ್ತಾರೆ ಮೋದಿಜೀ ಅವರು ಮುರ್ಖರಲ್ಲ ಎಂದು ರಾಹುಲ್ ಕುಟುಕಿದರು.

ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲು ಹೇಳುವಾಗ ನಮ್ಮಲ್ಲಿ ದುಡ್ಡೆಲ್ಲಿಂದ ಎಂದು ಕೇಳಿದ್ದರು. ನಮ್ಮಲ್ಲಿ ದುಡ್ಡು ಪ್ರಿಂಟ್ ಮಾಡುವ ಮಷಿನ್ ಇಲ್ಲವೆಂದು ಹೇಳಿದ್ದರು. ಹಾಗೆ ಹೇಳಲು ಯಡಿಯೂರಪ್ಪ ಅವರಿಗೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಜಾವೇಡ್‌ಕರ್, ಯೋಗಿ ಆದಿತ್ಯನಾಥ್, ಯಡಿಯೂರಪ್ಪ, ಶೋಭಾರಿಗೆ ಬುದ್ಧಿ ಕಲಿಸಬೇಕೇ ಬೇಡವೇ?’ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ‌ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಆಗಿದ್ದಾಗ ಒಂದು ದಿನವೂ ರೈತರ‌ಮನೆಗೆ ಯಡಿಯೂರಪ್ಪ ಹೋಗಿಲ್ಲ. ಪರಿಶಿಷ್ಟ ಜಾತಿಯವರ ಮನೆಗೆ ತಿಂಡಿ ತಿನ್ನಲು ಯಡಿಯೂರಪ್ಪ ಹೋಗಿ ಅವರಿಗೇ ಅವಮಾನ‌ ಮಾಡಿ ಬರುತ್ತಾರೆ. ಹೋಟೆಲ್ ನಿಂದ ತಿಂಡಿ ತಂದು ಯಡಿಯೂರಪ್ಪ, ಶೋಭಾ ತಿನ್ನುತ್ತಾರೆ. ಈ ಢೋಂಗಿತನ‌ ಬಿಡಿ,‌ ನಾಟಕ‌ ಬಿಡಿ’ ಎಂದು ಟೀಕಿಸಿದರು.

‘ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ. ಬಿಜೆಪಿಯವರು ಜನರ ಪರವಾಗಿಲ್ಲ. ಬಿಜೆಪಿಯವರು ಅವಕಾಶ ವಂಚಿತರಾಗಿರುವವರ, ಸಾಮಾಜಿಕ ನ್ಯಾಯದ ಪರವಾಗಿರುವವರಲ್ಲ. ಜನರು ಬಿಜೆಪಿಯವರ ಬಣ್ಣದ ಮಾತಿಗೆ‌ ಮರಳಾಗಬಾರದು’ ಎಂದು ಸಿದ್ದರಾಮಯ್ಯ ಕರೆ ನೀಡಿದರು.

‘ನರೇಂದ್ರ ಮೋದಿಯವರದ್ದು ಯು ಟರ್ನ್ ಸರಕಾರ. ಹಿಂದೆ ಆಧಾರ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದವರು ಈಗ ಹುಟ್ಟಿನಿಂದ ಸಾವಿನವರೆಗೆ ಆಧಾರ್ ಬೇಕೆನ್ನುತ್ತಾರೆ . ಕಪ್ಪು ಹಣ ತರುತ್ತೇವೆ, ಭ್ರಷ್ಟರ ನಿದ್ದೆಗೆಡಿಸುತ್ತೇವೆ ಎಂದಿದ್ದರು. ಆದರೆ, ನಿದ್ದೆಗೆಟ್ಟವರು, ಸತ್ತವರು ಬಡವರೇ ಹೊರತು ಶ್ರೀಮಂತರಲ್ಲ’ ಎಂದು ಅವರು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ, ಸಂಸದರಾದ ಡಾ. ಎಂ.ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಅಭಯ ಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

__sathish kapikad, Mob : 9035089084

Comments are closed.