ಕರಾವಳಿ

ಜನಾಶೀರ್ವಾದ ಯಾತ್ರೆ ; ಭಾರೀ ಜನಸ್ತೋಮದ ನಡುವೆ ಮಂಗಳೂರಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ…

Pinterest LinkedIn Tumblr

ಮಂಗಳೂರು,ಮಾರ್ಚ್.20 : ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಉಡುಪಿ ಹಾಗೂ ದ.ಕ.ಜಿಲ್ಲೆಗಳಲ್ಲಿ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಪಾಲ್ಗೊಂಡ ಬಳಿಕ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ 11:30ಕ್ಕೆ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿದರು. ಬಳಿಕ ಉಡುಪಿ ಜಿಲ್ಲೆಯ ಎರ್ಮಾಲ್ ಹಾಗೂ ಕಾಪುವಿನಲ್ಲಿ ನಡೆದ ಸೇವಾದಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಾಶೀರ್ವಾದ ಯಾತ್ರೆ ಆರಂಭಿಸಿದ ಅವರು, 3.30ಕ್ಕೆ ಮುಲ್ಕಿ ಮತ್ತು 4:20ಕ್ಕೆ ಸುರತ್ಕಲ್‌‌ನಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡರು.

ಸಂಜೆ ಸುರತ್ಕಲ್ ನಿಂದ ಆಗಮಿಸಿದ ರಾಹುಲ್ ಗಾಂಧಿ ಅವರು ಸರ್ಕ್ಯೂಟ್ ಹೌಸ್ ನಲ್ಲಿ ಕೆಲವು ನಿಮಿಷ ಕಾಲ ವಿಶ್ರಾಂತಿ ಪಡೆದು ನಂತರ ನಗರದ ಅಂಬೇಡ್ಕರ್ ವೃತ್ತ (ಜ್ಯೋತಿ ವೃತ್ತ) ದಿಂದ ನೆಹರೂ ಮೈದಾನದವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

ತೆರೆದ ವಾಹನದಲ್ಲಿ ಭಾರೀ ಜನಸ್ತೋಮದ ನಡುವೆ ಸಾಗಿದ ಅವರು ಸುತ್ತಮುತ್ತಲೂ ನೆರೆದಿದ್ದ ಸಾವಿರಾರು ಜನರತ್ತ ಕೈಬೀಸಿದರು.

ರೋಡ್ ಶೋ ಮೂಲಕ ನೆಹರೂ ಮೈದಾನ ತಲುಪಿದ ಅವರು, ನೆಹರು ಮೈದಾನದಲ್ಲಿ ಉತ್ತರ ದಿಕ್ಕಿಗೆ ಹಾಕಲಾದ ಬೃಹತ್ ವೇದಿಕೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ, ಸಂಸದರಾದ ಡಾ. ಎಂ.ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಅಭಯ ಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಮತ್ತಿತರ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

ದೇವಸ್ಥಾನ,ದರ್ಗಾ,ಚರ್ಚ್‌ಗೆ ಭೇಟಿ :

ನಗರದ ನೆಹರೂ ಮೈದಾನದಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ರಾಹುಲ್ ಗಾಂಧಿಯವರು ನಗರದ ರೊಝಾರಿಯೋ ಚರ್ಚ್‌, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲು ತೆರಳಿದರು.

ರಾತ್ರಿ ಸರ್ಕ್ಯೂಟ್ ಹೌಸ್‌‌ನಲ್ಲಿ ತಂಗಲಿರುವ ರಾಹುಲ್ ಗಾಂಧಿ ನಾಳೆ ಬೆಳಗ್ಗೆ ಶೃಂಗೇರಿಗೆ ತೆರಳಲಿದ್ದಾರೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರು ತಿಳಿಸಿದ್ದಾರೆ.

Comments are closed.