ಕರಾವಳಿ

ಉತ್ತರ ಕನ್ನಡ: ಹೊಸ ಮತದಾರರಿಗೆ ಸ್ಕೂಬಾ ಡೈವಿಂಗ್‌ ಆಕರ್ಷಣೆ

Pinterest LinkedIn Tumblr


ಕಾರವಾರ: ಜಿಲ್ಲಾಡಳಿತ ಮೊಟ್ಟ ಮೊದಲಬಾರಿಗೆ ಮತದಾನ ಹಕ್ಕು ಪಡೆದ ಯುವ ಮತದಾರರಿಗೆ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿಸುವ ಮೂಲಕ ಜಾಗೃತಿ ಮೂಡಿಸಿತು. ಶನಿವಾರ ಅರಬ್ಬಿ ಸಮುದ್ರದ ದ್ವೀಪ ಲೈಟ್‌ ಹೌಸ್‌ ಬಳಿ ಕಡಲಾಳದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಎಸ್‌.ನಕುಲ್‌ ಜನವರಿ 1, 2000ನೇ ಇಸವಿಯಲ್ಲಿ ಜನಿಸಿ, ಈಗ ಮತದಾನದ ಹಕ್ಕು ಪಡೆದಿರುವ ಸಹಸ್ರಮಾನ ಮತದಾರರಿಗೆ ಮತದಾರ ಚೀಟಿ ವಿತರಿಸಿ ಚುನಾವಣೆಯಲ್ಲಿ ಮತ ಚಲಾಯಿಸಲು ವಿನೂತನ ಸಂದೇಶ ನೀಡಿದರು.

ಕಾಳಿ ಸೇತುವೆ ಸಮೀಪದ ದೇವಭಾಗ್‌ ರೆಸಾರ್ಟ್‌ ತರಬೇತಿ ಕೇಂದ್ರದಿಂದ ಅಂದಾಜು 20 ಕಿ.ಮೀ. ದೂರದ ದೇವಬಾಗ ಸಮುದ್ರ ದ್ವೀಪ ಲೈಟ್‌ಹೌಸ್‌ಗೆ ಶನಿವಾರ ಬೆಳಗ್ಗೆಯೇ ತೆರಳಿದ ಜಿಲ್ಲಾಧಿಕಾರಿ, ಜಿಪಂ ಸಿಇಒ ನೇತೃತ್ವದಲ್ಲಿ ಮೊದಲ ಬಾರಿಗೆ ಮತದಾನ ಹಕ್ಕು ಪಡೆದ ಯುವಕರ ತಂಡ ಅರಬ್ಬಿ ಸಮುದ್ರದ ಕಡಲಾಳದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿತು.

ಕಡಲಾಳದಲ್ಲಿ ಸಹಸ್ರಮಾನ ಮತದಾರರಿಗೆ ಮತದಾರ ಚೀಟಿ ವಿತರಿಸಲು ಸಿದ್ಧಗೊಳಿಸಿದ ವೇದಿಕೆಯಲ್ಲಿ ಜಿಲ್ಲಾಧಿಕಾರಿ, ಸಹಸ್ರಮಾನದ ಮತದಾರರಾದ ಕಾರವಾರ ತಾಲೂಕಿನ ಕಿನ್ನರದ ಅಕ್ಷಯ್‌ ವಿಲಾಸ ಗೋವೇಕರ್‌, ಸದಶಿವಗಡದ ಪೂನಂ ರವಿ ಗಜನೀಕರ್‌, ಭಟ್ಕಳ ತಾಲೂಕು ಕಾಯ್ಕಿಣಿಯ ದೀಕ್ಷಾ ಮುಕುಂದ ಮಡಿವಾಳ ಹಾಗೂ ಕಾರವಾರದ ಐಶ್ವರ್ಯ ಅವರಿಗೆ ಮತದಾರರ ಚೀಟಿ ವಿತರಿಸಿದರು.

ನಂತರ ಸದಾಶಿವಗಡ ಜಂಗಲ್‌ಲಾಡ್‌c ರೆಸಾರ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಪ್ರತಿ ಮತವೂ ಒಂದು ಹನಿ ನೀರಿನಂತೆ ಇದ್ದು, ಪ್ರತಿ ಮತವೂ ಅಮೂಲ್ಯವಾಗಿರುತ್ತದೆ ಎಂದರು.

ಮತದಾನಕ್ಕೆ ಅರ್ಹರಾದ ಪ್ರತಿಯೊಬ್ಬ ಮತದಾರರನ್ನು ಗುರುತಿಸಿ ಅವರನ್ನು ಮತದಾನ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 2000 ಜನೇವರಿ 1 ರಂದು ಜನಿಸಿದವರನ್ನು ಮಿಲೇನಿಯಮ್‌ ಮತದಾರರು ಎಂದು ಗುರುತಿಸಲಾಗಿದೆ. ಇಂತಹ ಮಿಲೇನಿಯಮ್‌ ಮತದಾರರು ಜಿಲ್ಲೆಯಲ್ಲಿ 13 ಜನ ಇದ್ದಾರೆ. ಉ.ಕ. ಜಿಲ್ಲೆಯಲ್ಲಿ ಒಟ್ಟೂ 1134513 ಮತದಾರರಿದ್ದಾರೆ. ಇವರಲ್ಲಿ 574532 ಪುರುಷ ಮತ್ತು 559981 ಮಹಿಳಾ ಹಾಗೂ 13612 ವಿಕಲಚೇತನ ಮತದಾರರು ಇದ್ದಾರೆ. 362 ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಜಿಲ್ಲೆಯಲ್ಲಿ 1434 ಮತಗಟ್ಟೆಗಳಿವೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿಕಲಚೇತನ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೆರವು ಎಂಬ ಭಿತ್ತಿ ಪತ್ರವನ್ನು ಜಿಲ್ಲಾಧಿಕಾರಿ ಮತ್ತು ಸಿಇಒ ಬಿಡುಗಡೆಗೊಳಿಸಿದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಉಪಸ್ಥಿತರಿದ್ದರು.

-ಉದಯವಾಣಿ

Comments are closed.