ಕರಾವಳಿ

ಅಗ್ನಿ ಆಕಸ್ಮಿಕ : ಶಾಲಾ ವಾಹನ ಬೆಂಕಿಗಾಹುತಿ

Pinterest LinkedIn Tumblr

ಸುಳ್ಯ, ಮಾರ್ಚ್.15: ಚಾಲಕನ ಮನೆ ಸಮೀಪ ನಿಲ್ಲಿಸಿದ ಖಾಸಗಿ ಶಾಲಾ ವಾಹನವೊಂದು ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣ ಉರಿದು ಭಸ್ಮವಾದ ಘಟನೆ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಎಂಬಲ್ಲಿ ಇಂದು ಮುಂಜಾನೆ ನಡೆದಿದ್ದು, ವಾಹನದಲ್ಲಿ ಯಾರು ಇರದ ಕಾರಣ ಸಂಭಾವ್ಯ ಭಾರೀ ದುರಂತವೊಂದು ತಪ್ಪಿದೆ.

ಸುಳ್ಯ ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಾಹನ ಇದಾಗಿದ್ದು, ಅವಘಡದ ವೇಳೆ ಶಾಲಾ ವಾಹನದಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಈ ಸ್ಕೂಲ್ ಬಸ್ಸನ್ನು ಅದರ ಚಾಲಕ ತನ್ನ ಮನೆಗೆ ಕೊಂಡೊಯ್ಯುತ್ತಿದ್ದ. ಬೆಳಗ್ಗೆ ತನ್ನ ಮನೆಯಿಂದಲೇ ಹೊರಟು ವಿದ್ಯಾರ್ಥಿಗಳನ್ನು ಹೇರಿಕೊಂಡು ಕೆವಿಜಿ ಶಾಲೆಗೆ ತಲುಪಿಸುತ್ತಿದ್ದ.

ಎಂದಿನಂತೆ ನಿನ್ನೆ ಸಂಜೆಯೂ ಬಸ್ಸನ್ನು ಚಾಲಕ ಕೊಂಡೊಯ್ದು ತನ್ನ ಮನೆ ಬಳಿ ನಿಲ್ಲಿಸಿದ್ದ. ಆದರೆ ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಬಸ್ಸಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದ ಇಡೀ ವ್ಯಾಪಿಸಿದ ಬೆಂಕಿ ಕೆನ್ನಾಲಗೆಗೆ ಸಿಲುಕಿ ಬಸ್ ಸಂಪೂರ್ಣ ಉರಿದಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೂ ಅಷ್ಟು ಹೊತ್ತಿಗಗಾಗಲೇ ಬಸ್ ಸಂಪೂರ್ಣ ಉರಿದು ಭಸ್ಮವಾಗಿದೆ. ಬೆಂಕಿ ಅನಾಹುತಕ್ಕೆ ಏನು ಕಾರಣ ಎಂದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.

Comments are closed.